ಕುಪ್ವಾರಾ, ಸೆ.21 (DaijiworldNews/HR): ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ಕುಪ್ವಾರಾ ಜಿಲ್ಲೆಯ ಭಾಗದ ಹಳ್ಳಿಗಳಿಗೆ 70 ವರ್ಷಗಳ ಬಳಿಕ ಇದೀಗ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಇದೀಗ ಹಿಮಚ್ಛಾದಿತ ಪ್ರದೇಶದಲ್ಲಿರುವ ಆ ಹಳ್ಳಿಗಳವರೆಗೆ ನೂರಾರು ಕಿ.ಮೀ.ಗಳವರೆಗೆ ವಿದ್ಯುತ್ ಲೈನ್ಗಳನ್ನು ಎಳೆದು, ಅಲ್ಲಿನ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಗಡಿಭಾಗದ ಕೇರನ್ಗೆ ವಿದ್ಯುತ್ ಕಲ್ಪಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಮಚಿಲ್ ವಲಯದ ಹಳ್ಳಿಗಳಿಗೂ ತಲುಪಿದೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗಗಳು ಬೆಳಕು ಕಂಡಿವೆ.
ಇನ್ನು ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಆ ಹಳ್ಳಿಗಳು ಇಂದು ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಂಡಿವೆ, ಪ್ರತಿ ಬಾರಿಯ ಚುನಾವಣೆಯಲ್ಲಿ ಇವರ ಪ್ರಾಂತ್ಯಗಳಲ್ಲಿ ಶೇ.60 ಮತದಾನವಾಗುತ್ತದೆ. ಆದರೂ, ಇವರ ಸಮಸ್ಯೆಯನ್ನು ಯಾರೂ ಆಲಿಸಿಲ್ಲ. ನಾನು ಇಲ್ಲಿನ ಜನರೊಂದಿಗೆ ಭೇಟಿ ನೀಡಿದಾಗ ಅವರು ನಮಗೆ ವಿದ್ಯುತ್ ಎಂದಿಗೆ ಬರುತ್ತದೆ ಎಂದು ಕೇಳಿದ್ದರು. ಅದಕ್ಕೆ ಸ್ಪಂದಿಸಿ ತಕ್ಷಣ ಕಾರ್ಯಪ್ರವೃತ್ತನಾದೆ. ಆ ಪ್ರಯತ್ನದ ಫಲವಾಗಿ, ಈ ಹಳ್ಳಿಗರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ ಎಂದು ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.