ಹೊಸದಿಲ್ಲಿ, ಸೆ.21 (DaijiworldNews/HR): ಮಾನವ ಹಕ್ಕುಗಳ ಸಂರಕ್ಷಕರನ್ನು ಭಾರತದಲ್ಲಿ ತಕ್ಷಣವೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಹೇಳಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ತಜ್ಞ ತಂಡಕ್ಕೆ ಡಾ.ಕಫೀಲ್ ಖಾನ್ ಪತ್ರ ಬರೆದು,ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಶ್ವಸಂಸ್ಥೆ ಮಾನವಹಕ್ಕು ತಜ್ಞರ ತಂಡ ಜೂನ್ 26ರಂದು ಭಾರತ ಸರ್ಕಾರಕ್ಕೆ ಪತ್ರ ಬರೆದು ತಕ್ಷಣ ಮಾನವಹಕ್ಕು ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಹಿಂಸೆಗೆ ಕರೆ ನೀಡದಿದ್ದರೂ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ವಿರುದ್ಧ ದೇಶದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಯೋಗಿಸಲಾಗುತ್ತಿದ್ದು, ಇದು ಖಂಡನೀಯ ಎಂದು ಡಾ.ಕಫೀಲ್ ಖಾನ್ ವಿವರಿಸಿದ್ದು, ಎಲ್ಲ ಅಡೆತಡೆಗಳ ಮಧ್ಯೆಯೂ ದೇಶದ ಜನತೆಗೆ ಸೇವೆ ಸಲ್ಲಿಸುವ ಬದ್ಧತೆಯನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಇನ್ನು ಪತ್ರದಲ್ಲಿ, ನನಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗಿದ್ದು, ಹಲವು ದಿನಗಳ ಕಾಲ ಅನ್ನ- ನೀರು ಕೂಡಾ ನೀಡಿಲ್ಲ. ಕೈದಿಗಳಿಂದ ತುಂಬಿ ತುಳುಕುತ್ತಿದ್ದ, ಇಕ್ಕಟ್ಟಾದ ಮಥುರಾ ಜೈಲಿನಲ್ಲಿ ಏಳು ತಿಂಗಳ ಬಂಧನದ ಅವಧಿಯಲ್ಲೂ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಹೈಕೋರ್ಟ್ನಲ್ಲಿ ಎನ್ಎಸ್ಎ ಅಡಿ ಮಾಡಿದ್ದ ಆರೋಪದಿಂದ ನನ್ನನ್ನು ಮುಕ್ತಗೊಳಿಸಲಾಗಿದ್ದು ಎಂದು ಕಫೀಲ್ ಖಾನ್ ಉಲ್ಲೇಖಿಸಿದ್ದಾರೆ.