ನವದೆಹಲಿ, ಸೆ 21(Daijiworld News/PY): ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರಕ್ಕೆ ತೀವ್ರ ವಿರೋಧ ಪಡಿಸಿದ್ದ ಹಿನ್ನೆಲೆ 8 ಸಂಸದರನ್ನು ಅಮಾನತುಗೊಳಿಸಿರುವುದು ದುರದೃಷ್ಟಕರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಹೋರಾಡಿದ 8 ಸಂಸದರನ್ನು ಅಮಾನತುಗೊಳಿಸುವುದು ದುರದೃಷ್ಟಕರ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಗೌರವ ನೀಡದ ಈ ನಿರಂಕುಶಾಧಿಕಾರಿ ಸರ್ಕಾರದ ಮನಸ್ಥಿತಿಯ ಪ್ರತಿಫಲನವಾಗಿದೆ. ನಾವು ಈ ವಿಚಾರವಾಗಿ ತಲೆಬಾಗುವುದಿಲ್ಲ. ಇದರ ವಿರುದ್ದ ಹೋರಾಡುತ್ತೇವೆ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಗದ್ದಲ ಉಂಟಾಗಿದ್ದು, ಈ ಸಂಬಂಧ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ.
ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ.