ಬೆಂಗಳೂರು, ಸೆ 21(Daijiworld News/PY): ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ, ಸದನವನ್ನು ಮೊಟಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಈ ವಿಚಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿರೋಧಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸದನ ಮೊಟಕುಗೊಳಿಸುವ ವಿಚಾರದ ಬಗ್ಗೆ ಸಿಎಂ ಬಿಎಸ್ವೈ ಅವರು ನನ್ನ ಜೊತೆ ಮಾತನಾಡಿದ್ದರು. ಈ ವಿಚಾರವಾಗಿ ನಾನು, ಕೊರೊನಾ ನಿಮ್ಮಿಂದಲೇ ಹೆಚ್ಚಾಗುತ್ತಿದೆ. ಅಧಿವೇಶನವನ್ನು ಮೊಟಕುಗೊಳಿಸುವುದಕ್ಕೆ ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಮೂರು ದಿನಗಳ ಕಾಲ ಅಧಿವೇಶನ ನಡೆಯಲು ನಮ್ಮ ಪ್ರಸ್ತಾಪವಿದೆ. ಅಧಿವೇಶನದ ಸಂದರ್ಭ ಸುಮಾರು 30-40 ಬಿಲ್ಗಳಿಗೆ ಒಪ್ಪಿಗೆ ಸಿಗಬೇಕು ಎನ್ನುವ ಕಾರಣದಿಂದ ಬಿಲ್ ತಂದಿದ್ದಾರೆ. ಸದನ ಮೊಟಕುಗೊಳಿಸಿದರೆ, ಬಿಲ್ಗಳನ್ನು ಪುನಃ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಸಿಎಂ ಬಿಎಸ್ವೈ ಅವರು, ಇಂದಿನಿಂದ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅಧಿವೇಶನ ಕಲಾಪವನ್ನು ಕಡಿತಗೊಳಿಸುವಂತಹ ಅನಿಸಿಕೆ ಇದೆ. ಈ ವಿಚಾರದ ಬಗ್ಗೆ ಕಲಾಪದ ಸಲಹಾ ಸಮಿತಿಯಲ್ಲಿ ಚರ್ಚಿಸುತ್ತೇನೆ. ಆದರೆ, ಇದಕ್ಕೆ ವಿರೋಧ ಪಕ್ಷಗಳ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.