ನವದೆಹಲಿ, ಸೆ. 21 (DaijiworldNews/MB) : ರೈತರ ಮರಣ ಶಾಸನಕ್ಕೆ ಅಂಗೀಕಾರ ಪಡೆದು ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ವಿರೋಧಪಕ್ಷಗಳ ಅಭಿವ್ಯಕ್ತಿಯನ್ನು ಸ್ವಾತಂತ್ರ್ಯದ ಕೊರಳು ಹಿಚುಕಿ, ರೈತರ ಪಾಲಿಗೆ ಮರಣಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಕೊರೊನಾ ಸೋಂಕು ನಿಯಂತ್ರಿಸಲಾಗದೆ ಮಂಡಿ ಊರಿ ದೇಶದ ಜನರನ್ನು ಸಾವು-ನೋವಿನ ದವಡೆಗೆ ನೂಕುತ್ತಿರುವ ಅಸಮರ್ಥ ಬಿಜೆಪಿ ಸರ್ಕಾರ, ಈ ಅವಕಾಶ ದುರ್ಬಳಕೆ ಮಾಡಿಕೊಂಡು ಕೊರೊನೋತ್ತರ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ'' ಎಂದು ಹೇಳಿದ್ದಾರೆ.
''ಕೃಷಿಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಸಂಸತ್ನಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ?'' ಎಂದು ಪ್ರಶ್ನಿಸಿದ್ದಾರೆ.
''ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರು ಕೃಷಿಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯ ನಾಶವೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು'' ಎಂದು ಹೇಳಿದ್ದಾರೆ.
''ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸಲು ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದುರೈತರ ಬೆನ್ನು ಮುರಿಯುವ ಮನೆಹಾಳು ಕೆಲಸ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ರೈತರ ಬೆಳೆಗೆ ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗದಿರುವುದೇ ಕೃಷಿಕ್ಷೇತ್ರದ ಮೂಲ ಸಮಸ್ಯೆ. ಇದಕ್ಕಾಗಿಯೇ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತದೆ. ಬಿಜೆಪಿ ಸರ್ಕಾರದ ಹೊಸ ಕಾನೂನಿನಲ್ಲಿ ಬೆಂಬಲ ಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ'' ಎಂದು ಆರೋಪಿಸಿದ್ದಾರೆ.
''ಹೊಸ ಎಪಿಎಂಸಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ. ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ. ಇದು ಖಾಸಗಿ ವರ್ತಕರ ಮುಂದೆ ಸರ್ಕಾರದ ಸಂಪೂರ್ಣ ಶರಣಾಗತಿ'' ಎಂದು ಸರ್ಕಾರವನ್ನು ಟೀಕೆ ಮಾಡಿದ್ದಾರೆ.
''ಪ್ರಸ್ತುತ 6% ರೈತರು ಮಾತ್ರ ಎಪಿಎಂಸಿಗಳಲ್ಲಿ ಬೆಳೆ ಮಾರುತ್ತಿದ್ದು 94% ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಬಿಜೆಪಿ ಸರ್ಕಾರಕ್ಕೆ ಇದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿ ಪರವಾನಿಗೆಯಿಂದ ಹೊಸ ಮಾರುಕಟ್ಟೆಗಳನ್ನು ಸ್ಥಾಪಿಸಬಹುದಲ್ಲಾ?'' ಎಂದು ಪ್ರಶ್ನಿಸಿದ್ದಾರೆ.
''ನಮ್ಮಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಆಯ್ಕೆಯಾದ ರೈತ ಪ್ರತಿನಿಧಿಗಳನ್ನೊಳಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳೇ ಕೇಂದ್ರ ಸರ್ಕಾರ ನಿಗದಿಪಡಿಸುವ ಬೆಂಬಲ ಬೆಲೆಯಂತೆ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸಿರುತ್ತವೆ. ಈ ವ್ಯವಸ್ಥೆಯ ನಾಶ ಯಾರ ಹಿತಕ್ಕಾಗಿ?'' ಎಂದು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.
''ಒಮ್ಮೆ ಈ ಬಹುರಾಷ್ಟ್ರೀಯ ಕಂಪೆನಿಗಳು ಹೊಸ ಕಾಯ್ದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತ ಗೊಳಿಸಿ, ನಾಶ ಮಾಡಲು ಬಹಳ ದಿನಗಳು ಬೇಕಾಗಲಾರದು. ರೈತ ಬಂಧುಗಳೇ ಎಚ್ಚರ ಇರಲಿ'' ಎಂದು ತಿಳಿಸಿದ್ದಾರೆ.
''ಕೇಂದ್ರ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತರಲು ಹೊರಟಿರುವ ವಿಧಾನವೇ ಪ್ರಜಾಪ್ರಭುತ್ವ ವಿರೋಧಿ. ರೈತರಿಗೆ ನೆರವಾಗುವ ಉದ್ದೇಶ ಹೊಂದಿದ್ದರೆ ರೈತ ಪ್ರತಿನಿಧಿಗಳು, ಎಪಿಎಂಸಿ ಪದಾಧಿಕಾರಿಗಳು ಮತ್ತು ವರ್ತಕರ ಅಭಿಪ್ರಾಯ ಪಡೆದು ಈ ತಿದ್ದುಪಡಿಯನ್ನು ರೂಪಿಸಬೇಕಾಗಿತ್ತು'' ಎಂದು ಹೇಳಿದ್ದಾರೆ.
''ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಯನ್ನು ಬಿಜೆಪಿ ಕರ್ನಾಟಕ ಸರ್ಕಾರ ತಿದ್ದುಪಡಿ ಮಸೂದೆಯ ಮೂಲಕ ಅನುಮೋದಿಸಲು ಹೊರಟಿದೆ. ಕರ್ನಾಟಕ ಕಾಂಗ್ರೆಸ್ ವಿಧಾನಮಂಡಲದ ಎರಡೂ ಸದನಗಳ ಒಳಗೆ ಮತ್ತು ಹೊರಗೆ ಸಮಾನಮನಸ್ಕ ಸಂಘಟನೆಗಳ ಜೊತೆಗೂಡಿ ಇದನ್ನು ವಿರೋಧಿಸಲಿದೆ'' ಎಂದು ತಿಳಿಸಿದ್ದಾರೆ.