ಡೆಹ್ರಾಡೂನ್, ಸೆ 21(Daijiworld News/PY): ಕೇದಾರನಾಥ ದುರಂತದಲ್ಲಿ ಸಾವನ್ನಪ್ಪಿದ್ದ ನಾಲ್ಕು ಮಂದಿಯ ಅಸ್ಥಿಪಂಜರದ ಅವಶೇಷಗಳು ದುರಂತದ ಏಳು ವರ್ಷಗಳ ನಂತರ ಹಿಮಾಲಯದ ರಾಂಬರದಲ್ಲಿ ಪತ್ತೆಯಾಗಿದೆ.
ಭಾನುವಾರ ಈ ಪ್ರದೇಶದಲ್ಲಿ ಪೊಲೀಸರು ಹಾಗೂ ಎನ್ಡಿಆರ್ಎಫ್ ಸಿಬ್ಬಂದಿಗಳು ಜಂಟಿಯಾಗಿ ಶೋಧ ಕಾರ್ಯಚರಣೆ ಸಂದರ್ಭ ಈ ಅವಶೇಷಗಳು ಪತ್ತೆಯಾಗಿವೆ ಎಂದು ರುದ್ರಪ್ರಯಾಗ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಬುಲ್ಲಾರ್ ತಿಳಿಸಿದ್ದಾರೆ.
ಅವಶೇಷಗಳ ಡಿಎನ್ಎ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, ನಂದಪ್ರಯಾಗದಲ್ಲಿ ಹಿಂದೂ ಆಚರಣೆಯ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ. ದುರಂತದ ಸಂದರ್ಭ ನಾಪತ್ತೆಯಾದವರ ಗುರುತು ಪತ್ತೆ ಮಾಡಲು ನಾಪತ್ತೆಯಾದವರ ಕುಟುಂಬದ ಸದಸ್ಯರ ಡಿಎನ್ಎಗಳೊಂದಿಗೆ ಹಾಗೂ ಅಸ್ಥಿಪಂಜರದ ಡಿಎನ್ಎಗಳನ್ನು ಹೋಲಿಕೆ ಮಾಡಿ ನೋಡಲಾಗುವುದು ಎಂದಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಪೈಕಿ ಸುಮಾರು 703 ಜನರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ದುರಂತದಲ್ಲಿ ಸುಮಾರು 10 ಸಾವಿರ ಮಂದಿ ಸಾವನ್ನಪ್ಪಿದ್ದು, ಇನ್ನೂ 3,183 ಮಂದಿ ನಾಪತ್ತೆಯಾಗಿದ್ದಾರೆ.