ನವದೆಹಲಿ,ಸೆ.21 (DaijiworldNews/HR): ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ರಕ್ಷಣಾ ಇಲಾಖೆಯ ದಾಖಲೆಗಳನ್ನು ಹೊಂದಿದ್ದ ಆರೋಪದ ಮೇರೆಗೆ ಅಧಿಕೃತ ಗೌಪ್ಯತಾ ಕಾಯ್ದೆಯಡಿ ಬಂಧಿಸಲಾಗಿದ್ದು, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ನ್ಯಾಯಾಲಯ ಇನ್ನೂ ಏಳು ದಿನಗಳವರೆಗೆ ವಿಸ್ತರಿಸಿದೆ.
ರಾಜೀವ್ ಶರ್ಮಾ ಸೇರಿದಂತೆ, ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಚೀನಾದ ಮಹಿಳೆ ಮತ್ತು ನೇಪಾಳದ ವ್ಯಕ್ತಿಯ ನ್ಯಾಯಾಂಗ ಬಂಧನ ಅವಧಿಯನ್ನೂ ಏಳುದಿನಗಳವರೆಗೆ ವಿಸ್ತರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿದೇಶಾಂಗ ನೀತಿಗಳ ಕುರಿತು ಚೀನಾ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ರವಾನಿಸುತ್ತಿದ್ದರು ಎನ್ನುವ ಆರೋಪದಡಿ ಸೆ.14ರಂದು ಶರ್ಮಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಇನ್ನು ಚೀನಾ ಮೂಲದ ಮಹಿಳೆ ಮತ್ತು ನೇಪಾಳದ ವ್ಯಕ್ತಿಯು ಶೆಲ್ ಕಂಪೆನಿಯ ಮೂಲಕ ರಾಜೀವ್ ಶರ್ಮಾಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.