ನವದೆಹಲಿ, ಸೆ 21(Daijiworld News/PY): ದೇಶದಲ್ಲಿ ನಕ್ಸಲ್ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ. ಕೇವಲ 46 ಜಿಲ್ಲೆಗಳಲ್ಲಿ ಮಾತ್ರವೇ ಭೀತಿ ಇದೆ ಎಂದು ರಾಜ್ಯಸಭೆಗೆ ಕೇಂದ್ರ ಗೃಹಸಚಿವಾಲಯ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ.ಕೃಷ್ಣರೆಡ್ಡಿ ಅವರು, ದೇಶದ 11 ರಾಜ್ಯಗಳ 90 ಜಿಲ್ಲೆಗಳನ್ನು ಎಡಪಂಥೀಯ ಉಗ್ರಗಾಮಿತ್ವ (ಎಲ್ಡಬ್ಲ್ಯುಇ) ಎಂದು ಪರಿಗಣಿಸಲಾಗಿದ್ದು, ಹಾಗೂ ಗೃಹ ಸಚಿವಾಲಯದ ಭದ್ರತಾ ಸಂಬಂಧಿತ ಖರ್ಚು (ಎಸ್ಆರ್ಇ) ಯೋಜನೆಯಡಿ ಒಳಗೊಂಡಿದೆ ಎಂದು ತಿಳಿಸಿದರು.
2019ರಲ್ಲಿ ಎಲ್ಡಬ್ಲ್ಯುಇ ಸಂಬಂಧಿತ ಹಿಂಸಾತ್ಮಕ ಘಟನೆಗಳು 61 ಜಿಲ್ಲೆಗಳಲ್ಲಿ ಹಾಗೂ 2020ರ ಮೊದಲಾರ್ಧದಲ್ಲಿ ಕೇವಲ 46 ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಎಲ್ಡಬ್ಲ್ಯುಇ ಪೀಡಿತ ಪ್ರದೇಶಗಳಲ್ಲಿ 2015ರಿಂದ 2020ರ ಆಗಸ್ಟ್ 15ರವರೆಗೆ ನಡೆದ ಹಿಂಸಾಚಾರದಲ್ಲಿ 350 ಭದ್ರತಾ ಸಿಬ್ಬಂದಿ, 963 ನಾಗರಿಕರು ಹಾಗೂ 871 ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಒಟ್ಟು 4,022 ನಕ್ಸಲರು ಕೂಡಾ ಶರಣಾಗಿದ್ದಾರೆ ಎಂದು ಹೇಳಿದರು.