ಹೊನ್ನಾಳಿ, ಸೆ 21(Daijiworld News/PY): ರಾಜಕಾರಣದಲ್ಲಿ ಯಾರೂ ಕೂಡಾ ಸನ್ಯಾಸಿಗಳಲ್ಲ. ಅಲ್ಲದೇ, ಸಚಿವ ಸ್ಥಾನ ಕೇಳುವ ವಿಚಾರ ತಪ್ಪಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಸಚಿವ ಸ್ಥಾನದ ವಿಚಾರವಾಗಿ ವರಿಷ್ಠರು ಯಾವ ರೀತಿಯಾದ ತೀರ್ಮಾನ ಕೈಗೊಳ್ಳುತ್ತಾರೋ ಆ ತೀರ್ಮಾನಕ್ಕೆ ನಾನು ಬದ್ದ. ಯಾಕೆಂದರೆ ಸಚಿವ ಸ್ಥಾನದ ಬಗ್ಗೆ ವರಿಷ್ಠರ ತೀಮಾನ ಅಂತಿಮವಾಗಿದೆ ಎಂದರು.
ನಾನು ಅಬಕಾರಿ ಸಚಿವನಾಗಿದ್ದ ಸಂದರ್ಭ ಕಳ್ಳಭಟ್ಟಿ, ನಕಲಿ ಮದ್ಯವನ್ನು ತಡೆಗಟ್ಟಿದೆ. ನಾನು ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ. ಈ ಭೇಟಿಯ ವೇಳೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಮಾತ್ರವೇ ಚರ್ಚಿಸಿದ್ದು, ಬದಲಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಹೋಗಿಲ್ಲ ಎಂದು ಹೇಳಿದರು.
ಜಿಲ್ಲೆಯ ಶಾಸಕರು, ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.