ಬೆಂಗಳೂರು, ಸೆ 21(Daijiworld News/PY): ಕೊರೊನಾ ಹಿನ್ನೆಲೆ ವಿಧಾನಸಭೆ ಕಲಾಪವನ್ನು ಸೆ.26ರ ಶನಿವಾರ ಮುಕ್ತಾಯಗೊಳಿಸಲು ಕಲಾಪ ಸಲಹ ಸಮಿತಿ ನಿರ್ಧಾರ ಕೈಗೊಂಡಿದೆ.
ಸಭೆಯಲ್ಲಿ ಸಿಎಂ ಬಿಎಸ್ವೈ ಸೇರಿದಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಕಾಂಗ್ರೆಸ್ ಶಾಸಕರಾದ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಹಾಗೂ ಆಡಳಿತ ಮತ್ತು ಪ್ರತಿಪಕ್ಷಗಳ ಮುಖ್ಯ ಸಚೇತಕರು ಪಾಲ್ಗೊಂಡಿದ್ದರು.
ಅಧಿವೇಶನವನ್ನು ಸೆ. 21ರಿಂದ 30ರವರೆಗೆ ನಡೆಸುವುದಾಗಿ ತೀಮಾನ ಮಾಡಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಕಲಾಪವನ್ನು ಆರು ದಿನದಲ್ಲಿ ಮುಕ್ತಾಯಗೊಳಿಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಬಿಎಸ್ವೈ ಅವರು, ಮೂರು ದಿನಗಳಲ್ಲಿ ಅಧಿವೇಶನ ಮುಕ್ತಾಯಗೊಳಿಸುವಂತೆ ತೀರ್ಮಾನ ಮಾಡಿದ್ದೇವೆ. ಈ ವಿಚಾರವಾಗಿ ಶಾಸಕರು ಸೇರಿದಂತೆ ಸಚಿವರೊಂದಿಗೆ ಮಾತುಕತೆ ಮಾಡಿದ್ದೇನೆ. ಈಗಾಗಲೇ ಹಲವಾರು ಶಾಸಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದರು.