ಬೆಂಗಳೂರು, ಸೆ. 21 (DaijiworldNews/MB) : ದೇಶದಾದ್ಯಂತ ಕೃಷಿ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಲ್ಲಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ವಿರೋಧಿಸಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಪ್ರತಿಭಟನೆಯ ವೇಳೆ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತ ಮಹಿಳೆಯೋರ್ವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನಮ್ಮನ್ನು ಅವಿವೇಕಿ ಎಂದಿದ್ದಾರೆ. ನಮ್ಮನ್ನು ಅವಿವೇಕಿ ಎನ್ನಲು ಆತನ್ಯಾರು? ಎಂದು ಪ್ರಶ್ನಿಸಿದ್ದು ಬಿ.ಸಿ.ಪಾಟೀಲ್ ಅವರೇ ನಿಜವಾದ ಅವಿವೇಕಿ ಎಂದು ಸಿಡಿಮಿಡಿಗೊಂಡಿದ್ದಾರೆ.
ಇನ್ನು ಈ ಪ್ರತಿಭಟನೆಯ ಸಂದರ್ಭ ರೈತರೊಬ್ಬರು ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಕೂಡ ಬೆಂಬಲ ಸೂಚಿಸಿದ್ದು, ಸರ್ಕಾರ ರೈತರ ಹಿತದೃಷ್ಟಿಯಿಂದ ಈ ತಿದ್ದುಪಡಿ ತರುತ್ತಿಲ್ಲ ಬದಲಾಗಿ ಈ ಭೂಮಿಯನ್ನೇ ನಾಶ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯ ನೇತೃವವನ್ನು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ವಹಿಸಿದ್ದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಕೊರೊನಾ ನೆಪ ಹೇಳಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿರುವ ಸರ್ಕಾರ ಕೊರೊನಾ ವಿಚಾರದಲ್ಲಿ ಜನರನ್ನು ಮೌನಕ್ಕೆ ತಳ್ಳಿ ತಮಗೆ ಬೇಕಾದಂತೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ. ಆದರೆ ನಾವು ಈ ಕಾಯ್ದೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.