ಬೆಂಗಳೂರು, ಸೆ 21(Daijiworld News/PY): ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರ ನಡುವೆ ನಡೆದ ಗಲಾಟೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ನಾರಾಯಣ ಗೌಡ ಅವರು, ನಮ್ಮ ನಡುವೆ ಗಲಾಟೆ ಏನಿಲ್ಲ. ವರ್ಗಾವಣೆ ಬಗ್ಗೆ ಮಾತನಾಡುವ ಎಂದು ಹೇಳಿದ್ದೆ ಎಂದರು.
ಈ ಬಗ್ಗೆ ಮಾತನಾಡಿದ ಅವರು, ನಮ್ಮಿಬ್ಬರ ನಡುವೆ ಗಲಾಟೆ ಏನೂ ಇಲ್ಲ. ವರ್ಗಾವಣೆಯ ವಿಚಾರವಾಗಿ ಮಾತನಾಡುವ ಎಂದು ಕರೆದಿದ್ದೆ. ಈ ಸಂದರ್ಭ ಅವರು ಏಕ ವಚನದಲ್ಲಿ ಮಾತನಾಡಿದ್ದು, ನನಗೆ ಬೇಜಾರವಾಗಿತ್ತು. ಇನ್ನು ಈ ರೀತಿಯಾಗಿ ಮಾತನಾಡ ಕೂಡದು ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಈ ವಿಚಾರದ ಬಗ್ಗೆ ಸಿಎಂ ಅವರು ಮಾತುಕತೆಗೆ ನನ್ನನ್ನು ಕರೆದರೆ ನಾನು ಮಾತನಾಡುತ್ತೇನೆ. ಬೆಳ್ಳಿ ಪ್ರಕಾಶ್ ಅವರು ಮಾತುಕತೆಯ ಸಂದರ್ಭ ಏನೋ ಒಂದು ಶಬ್ದ ಬಳಕೆ ಮಾಡಿದ್ದರು. ಈ ವಿಚಾರವಾಗಿ ನನಗೆ ಬೇಸರವಾಗಿದೆ. ಈ ರೀತಿಯಾಗಿ ಮಾತನಾಡಬಾರದು ಎಂದು ನಾನು ಅವರಿಗೆ ತಿಳಿಸಿದ್ದೆ ಎಂದು ಹೇಳಿದರು.
ವಿಧಾನಸಭೆಯ ಮುಂಭಾಗದ ಮೊಗಸಾಲೆಯಲ್ಲಿ ಸೋಮವಾರ ಕಡೂರು ಶಾಸಕ ಬೆಳ್ಳಿಪ್ರಕಾಶ್ ಹಾಗೂ ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಅವರ ಮಧ್ಯೆ ಗಲಾಟೆ ನಡೆದಿದ್ದು, ಹೊಡೆದಾಟದ ಹಂತಕ್ಕೆ ತಲುಪಿತ್ತು. ಈ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಆವರಿಗೆ ಏಕ ವಚದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಬಳಿಕ ಹೊಡೆದಾಟಕ್ಕೂ ಮುಂದಾಗಿದ್ದರು.