ನವದೆಹಲಿ, ಸೆ 21(Daijiworld News/PY): ದೆಹಲಿ ಗಲಭೆಗೆ ಸಂಬಂಧಪಟ್ಟಂತೆ ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಬಂಧಿಯಾಗಿರುವ ಜೆಎನ್ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ತನ್ನ ಕುಟುಂಬದ ಭೇಟಿಗೆ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.
ಉಮರ್ ಖಾಲಿದ್ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ವಜಾಗೊಳಿಸಿದ್ದಾರೆ.
ಸೆ.13ರಂದು ಖಾಲಿದ್ ಅವರನ್ನು ಬಂಧಿಸಲಾಗಿದ್ದು, ಸೆ.24ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮರುದಿನವೇ ನ್ಯಾಯಾಲಯವು ಉಮರ್ ಅವರನ್ನು ವಿಚಾರಣೆ ನಡೆಸಲು ಅವಕಾಶ ನೀಡಿದ್ದು, 11 ಲಕ್ಷ ಪುಟಗಳಿರುವ ದಾಖಲೆಗಳೊಂದಿಗೆ ಆತನನ್ನು ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದರು.
ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಂದರ್ಭ ನನಗೆ ನನ್ನ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಕುಟುಂಬದವರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ಉಮರ್ ತಿಳಿಸಿದ್ದಾರೆ.
ತನಿಖಾಧಿಕಾರಿ ಅರ್ಜಿಗೆ ನೀಡಿದ ಉತ್ತರದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಖಾಲಿದ್ಗೆ ಪ್ರತಿದಿನ ತನ್ನ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಉಮರ್ ತನ್ನ ಕುಟುಂಬವನ್ನು ಭೇಟಿ ಮಾಡಿದರೆ ವಿಚಾರಣೆಗೆ ತೊಂದರೆಯಾಗಬಹುದು. ಅಲ್ಲದೇ, ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.