ನವದೆಹಲಿ, ಸೆ. 22 (DaijiworldNews/MB) : ಕೃಷಿ ಮಸೂದೆ ಮಂಡನೆ ಸಂದರ್ಭದಲ್ಲಿ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಕಾರಣದಿಂದ ಒಂದು ವಾರಗಳ ಕಾಲ ಕಲಾಪದಿಂದ ಅಮಾನತುಗೊಂಡಿರುವ 8 ಸಂಸದರು ತಮ್ಮ ಅಮಾನತನ್ನು ವಿರೋಧಿಸಿ ಸೋಮವಾರ ಸಂಸತ್ ಭವನದ ಬಳಿ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಜೆಡಿಎಸ್ನ ಎಚ್.ಡಿ ದೇವೇಗೌಡ, ಜಯಾ ಬಚ್ಚನ್ ಸೇರಿದಂತೆ ಹಲವರು ಈ ಸಂಸದರಿಗೆ ಬೆಂಬಲ ಸೂಚಿಸಿದ್ದಾರೆ.
ಸಂಸದರು ಹಾಸಿಗೆ, ದಿಂಬು, ಸೊಳ್ಳೆಬತ್ತಿಯೊಂದಿಗೆ ಅಹೋರಾತ್ರಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ರೈತ ಪರ ಘೋಷಣೆ ಕೂಗಿ, ಫಲಕ ಪ್ರದರ್ಶಿಸುತ್ತಾ ಧರಣಿ ಕೂತಿದ್ದು ಪ್ರತಿಪಕ್ಷದ ಹಿರಿಯ ನಾಯಕರಾದ ನ್ಯಾಷನಲ್ ಕಾನ್ಫರೆನ್ಸ್ನ ನಾಯಕ ಫಾರೂಖ್ ಅಬ್ದುಲ್ಲಾ, ಜೆಡಿಎಸ್ನ ಎಚ್.ಡಿ ದೇವೇಗೌಡ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕಾಂಗ್ರೆಸ್ನ ಅಹ್ಮದ್ ಪಟೇಲ್ ಮತ್ತು ಎನ್ಸಿಪಿಯ ಪ್ರಫುಲ್ ಪಟೇಲ್ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದರು. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಪ್ರತಿಭಟನೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಗವಹಿಸಿದ್ದರು.
ಇನ್ನು ಕಾಂಗ್ರೆಸ್ನ ರಿಪುನ್ ಬೋರಾ ಮತ್ತು ಸಿಪಿಐಎಂನ ಎಲರಾಮಂ ಕರೀಮ್ ಇಬ್ಬರೂ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು ಅವರು ಮೆಧುಮೇಹ ಕಾಯಿಲೆ ಹೊಂದಿದ್ದಾರೆ. ಈ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಕಾರರು ಆಂಬ್ಯುಲೆನ್ಸ್ ಒಂದನ್ನು ಸ್ಥಳದಲ್ಲೇ ನಿಯೋಜಿಸಿದ್ದರು.