ಬೆಂಗಳೂರು, ಸೆ. 22 (DaijiworldNews/MB) : ಕೊರೊನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಲ್ಲೇ ಇದ್ದು ಇದೀಗ ತಮಗೆ ಭರವಸೆ ನೀಡಿಯೂ ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಸೆಪ್ಟಂಬರ್ 23 ರ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ತಮಗೆ ನೀಡುತ್ತಿರುವ ಗೌರವ ಧನವನ್ನು 12 ಸಾವಿರ ರೂ. ಗೆ ಏರಿಸಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಈ ಹಿಂದೆ ನಡೆಸಿದ್ದ ಪ್ರತಿಭಟನೆಯು ಸರ್ಕಾರದ ಭರವಸೆಯ ಮೇರೆಗೆ ಸ್ಥಗಿತಗೊಳಿಸಿ 50 ದಿನ ಕಳೆದಿದ್ದು ಆದರೆ ಸರ್ಕಾರ ಯಾವುದೇ ಅಧಿಕೃತ ಘೋಷಣೆಗಳನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ.
ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ದೊರೆಯುವ ಪ್ರೋತ್ಸಾಹ ಧನ ತೀರಾ ಕಡಿಮೆಯಾಗಿದೆ. ಈ ಹಿನ್ನೆಲೆ ಆಶಾ ಕಾರ್ಯಕರ್ತೆಯರು ತಮ್ಮ ಪ್ರೋತ್ಸಾಹ ಧನವನ್ನು ಏರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಆರೋಗ್ಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುವ ನಮಗೆ ಕೊರೊನಾ ಪರೀಕ್ಷೆ ನಡೆಸಿ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಜರ್ಗಳನ್ನು ಒದಗಿಸಬೇಕು. ಹಾಗೆಯೇ ಈಗಾಗಲೇ ಘೋಷಿಸಲಾಗಿರುವ 3 ಸಾವಿರ ರೂ. ಯನ್ನು ಇನ್ನೂ ನೀಡದಿರುವ ಆಶಾಗಳಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ಆಶಾಕಾರ್ಯಕರ್ತೆಯರ ಬೇಡಿಕೆಯಾಗಿದ್ದು ಸೆಪ್ಟಂಬರ್ 23 ರಂದು ನಡೆಯಲಿರುವ ಈ ಪ್ರತಿಭಟನೆಯಲ್ಲಿ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಮೈಸೂರಿನಿಂದ ಸುಮಾರು 500-600 ಆಶಾ ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ ಎಂದು ಎಐಟಿಯುಸಿ ಸದಸ್ಯ ದುರ್ಗೇಶ್ ಪ್ರಕಾಶ್ ತಿಳಿಸಿದ್ದಾರೆ.