ಬೆಂಗಳೂರು, ಸೆ. 22 (DaijiworldNews/MB) : ರಾಜ್ಯಸಭೆಯ ಸಭಾಧ್ಯಕ್ಷರಾದ ಎಮ್ ವೆಂಕಯ್ಯ ನಾಯ್ಡು ಅವರು ಕೇಂದ್ರದ ಏಜೆಂಟ್ನಂತೆ ವರ್ತಿಸಿ ಅಗೌರವ ತಂದಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಭಾಧ್ಯಕ್ಷರ ವಿರುದ್ದ ಆಕ್ರೋಶಗೊಂಡಿದ್ದಾರೆ.
ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಭಾನುವಾರದಿಂದ ಕೋಲಾಹಲ ಉಂಟಾಗಿದ್ದು ಭಾನುವಾರ ರಾಜ್ಯಸಭೆಯ ಕೆಲವು ಸದಸ್ಯರು ಸದನದ ಬಾವಿಗೆ ಇಳಿದು ಬಂದಿರುವುದು ಅನುಚಿತ ವರ್ತನೆ ಎಂದು ಹೇಳಿ ಸಭಾಧ್ಯಕ್ಷರಾದ ಎಮ್ ವೆಂಕಯ್ಯ ನಾಯ್ಡು ಅವರು ಸೋಮವಾರ 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ. ಹಾಗೆಯೇ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಕೃಷಿ ಮಸೂದೆ ವಿರುದ್ದ ಮಾತನಾಡುವವರಿಗೆ ಅವಕಾಶ ನೀಡದೆ ಎಲ್ಲಾ ನಿಯಮಗಳನ್ನು, ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಅವರನ್ನು ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ಎಂದು 12 ವಿಪಕ್ಷಗಳು ಅವಿಶ್ವಾಸ ನಿಲುವಳಿ ಮಂಡಿಸಿದ್ದು ಇದನ್ನು ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದಾರೆ.
ಇದೀಗ ಈ ವಿಚಾರಗಳಲ್ಲಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರ ವಿರುದ್ದ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ''ಎಮ್ ವೆಂಕಯ್ಯ ನಾಯ್ಡುರವರೇ, ನೀವು ಪಕ್ಷಾತೀತವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಕೇಂದ್ರದ ಏಜೆಂಟ್ನಂತೆ ವರ್ತಿಸಿ ಅಗೌರವ ತಂದಿದ್ದೀರಿ. ಜನ ವಿರೋಧಿ ಮಸೂದೆಗಳನ್ನು ಪ್ರತಿಭಟಿಸಲೇಬಾರದೆ? ಸರ್ಕಾರದ ಕೊಲೆಗಡುಕ ನಿರ್ಧಾರಗಳನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವ 'ಹೌದಪ್ಪ' ಗಳಾಗಬೇಕೆ?'' ಎಂದು ಪ್ರಶ್ನಿಸಿದ್ದು, ''ಪ್ರಜಾಪ್ರಭುತ್ವ ನೈಜವಾಗಿ ಸತ್ತಿರುವುದು ಈಗ'' ಎಂದಿದ್ದಾರೆ.
ಇನ್ನು ಅಮಾನತುಗೊಂಡಿರುವ 8 ಸಂಸದರು ತಮ್ಮ ಅಮಾನತನ್ನು ವಿರೋಧಿಸಿ ಸೋಮವಾರ ಸಂಸತ್ ಭವನದ ಬಳಿ ಆಹೋರಾತ್ರಿ ಧರಣಿ ನಡೆಸುತ್ತಿದ್ದು ಜೆಡಿಎಸ್ನ ಎಚ್.ಡಿ ದೇವೇಗೌಡ, ಜಯಾ ಬಚ್ಚನ್ ಸೇರಿದಂತೆ ಹಲವರು ಈ ಸಂಸದರಿಗೆ ಬೆಂಬಲ ಸೂಚಿಸಿದ್ದಾರೆ.