ಬೆಂಗಳೂರು, ಸೆ. 22(DaijiworldNews/HR): 12 ವರ್ಷಗಳ ಹಿಂದೆ ನಗರವನ್ನು ಬೆಚ್ಚಿಬೀಳಿಸಿದ ಸರಣಿ ಸ್ಫೋಟಗಳಲ್ಲಿ ಪಾತ್ರವಹಿಸಿದ ಮತ್ತು ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಶೊಯೇಬ್ ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳಾ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಬಾಂಬ್ ಸ್ಫೋಟದಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಕೇರಳದಲ್ಲಿ ಆತನ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್ಲಿಂದ ವಶಕ್ಕೆ ತೆಗೆದುಕೊಂಡು ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.
2008ರಲ್ಲಿ ಈತ ನಡೆಸಿದ ಬಾಂಬ್ ಕೃತ್ಯದಲ್ಲಿ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ ಅದೇ ವರ್ಷ ಜೈಪುರ ಹಾಗೂ ಅಹಮದಾಬಾದ್ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಈ ಕೃತ್ಯದ ಹಿಂದೆ ಇದೀಗ ಸೆರೆಯಾಗಿರುವ ಅರೋಪಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ. 12 ವರ್ಷಗಳಿಂದ ನಾಪತ್ತೆಯಾಗಿದ್ದ ಶೊಯೇಬ್ಗಾಗಿ ರೆಡ್ ಕಾರ್ನರ್ ನೊಟೀಸ್ ಜಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕೇರಳದಲ್ಲಿ ಶೊಯೇಬ್ನನ್ನು ಬಂಧಿಸಿದ್ದಾರೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಲೀಂನನ್ನು 2018 ರಂದು ಕೇರಳದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೊದಲು ಜೈಪುರ ಸೀರಿಯಲ್ ಬ್ಲಾಸ್ಟ್ ಬಳಿಕ ಬೆಂಗಳೂರು ಬ್ಲಾಸ್ಟ್ ನಡೆದಿತ್ತು. ಬೆಂಗಳೂರಿನ 9 ಕಡೆಗಳಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿದ್ದರು.