ನವದೆಹಲಿ,ಸೆ. 22(DaijiworldNews/HR): ದೆಹಲಿಯಲ್ಲಿ ಹಿಂಸಾಚಾರ ಎಸಗಲು ಕಾಂಗ್ರೆಸ್ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಹೋರಾಟಗಾರ ಖಾಲಿದ್ ಸೈಫಿ ಮತ್ತು ಎಎಪಿಯ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ 1.61 ಕೋಟಿ ಹಣ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಫಿಯಾ ಉರ್ ರೆಹಮಾನ್ ಮತ್ತು ವಿದ್ಯಾರ್ಥಿ ಮೀರನ್ ಹೈದರ್ ಅವರ ಹೆಸರೂ ಹಣಪಡೆದವರ ಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ.
ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಶ್ರತ್, ತಾಹಿರ್ ಹುಸೇನ್ ಸೇರಿದಂತೆ 15 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಇಶ್ರತ್ ಜಹಾನ್, ಖಾಲಿದ್ ಸೈಫಿ, ತಾಹಿರ್ ಹುಸೇನ್, ರೆಹಮಾನ್, ಹೈದರ್ ಅವರ ಬ್ಯಾಂಕ್ ಖಾತೆಗಳಿಗೆ ಮತ್ತು ನಗದು ರೂಪದಲ್ಲಿ ಒಟ್ಟು 1,61,33,703 ಸಂದಾಯವಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪೈಕಿ 1,48,01186 ಮೊತ್ತವನ್ನು ಡ್ರಾ ಮಾಡಿಕೊಂಡಿದ್ದ ಆರೋಪಿಗಳು ಗಲಭೆಗೆ ಸಂಚು ರೂಪಿಸಲು, ಪ್ರತಿಭಟನೆಗೆ ಬಳಸಿಕೊಂಡಿದ್ದರು' ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.