ಬೆಂಗಳೂರು,ಸೆ. 22(DaijiworldNews/HR): ಕೊರೊನಾ ಉಪಕರಣಗಳ ಹಗರಣ ವಿಚಾರವಾಗಿ ಆರೋಪ ಕೇಳಿಬಂದಾಗಲೇ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕಲಾಪದಲ್ಲಿ ಲೆಕ್ಕ ಕೇಳಿದ್ದಾರೆ.
ಈ ಬಗ್ಗೆ ಚರ್ಚಿಸಿದ ಸಿದ್ದರಾಮಯ್ಯ, ಕೊರೊನಾ ಚೀನಾದಿಂದ ನಮ್ಮ ದೇಶಕ್ಕೆ ಬರುವಾಗಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ವೆಂಟಿಲೇಟರ್ಗಳ ಬೆಲೆ ಏರಿಕೆ ಆಗಿದೆಯಲ್ಲ ಎಂದಿದಕ್ಕೆ ಕೊರೊನಾ ಬಂದ ಕಾರಣ ರೇಟ್ ಜಾಸ್ತಿ ಆಗಿದೆ ಅಂತಿದ್ದಾರೆ. ಇನ್ನು ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಅನೇಕರು ಸತ್ತಿದ್ದಾರೆ. ಈ ಸಂಬಂಧ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ, ಅದರಲ್ಲಿಒಂದಕ್ಕೂ ಉತ್ತರ ಕೊಟ್ಟಿಲ್ಲ, ಇದನ್ನು ಜವಾಬ್ದಾರಿಯುತ ಸರ್ಕಾರ ಎಂದು ಕರೆಯಬೇಕಾ ಎಂಬುದಾಗಿ ಪ್ರಶ್ನಿಸಿದ್ದಾರೆ.
ಇನ್ನು ಪತ್ರ ವನ್ನು ಮುಖ್ಯಮಂತ್ರಿಗೆ ಮಾತ್ರವಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಬರೆದಿದ್ದೆ, ಅದಕ್ಕೆ ಉತ್ತರಿಸಿದ ಅವರು, ಸಿಎಂಗೆ ಫೈಲ್ ಕಳಿಸಿದ್ದೇನೆ, ಸಿಎಂಯಿಂದ ಯಾವುದೇ ಉತ್ತರ ಬಂದಿಲ್ಲ ಎಂದರು. ಈ ಸರ್ಕಾರ ಸಂಸದೀಯ ವ್ಯವಸ್ಥೆಯಲ್ಲಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಸರ್ಕಾರ ಎಂದು ಕರೆಯಬೇಕಾ ಎಂದಿದ್ದಾರೆ.
ಇನ್ನು ಸರ್ಕಾರದಲ್ಲಿ ಅವ್ಯವಹಾರ ನಡೀತಿದೆ ತಡೆಯರಿ ಎಂದಿದ್ದಕ್ಕೆ ಸಚಿವರು ಸುದ್ದಿಗೋಷ್ಠಿ ನಡೆಸಿ ಕೊರೊನಾಕ್ಕಾಗಿ ಖರ್ಚಿ ಮಾಡಿದ್ದು 323 ಕೋಟಿ, ಹೀಗಿರೋವಾಗ 4 ಸಾವಿರ ಕೋಟಿ ಹಗರಣ ಹೇಗಾಗುತ್ತೆ ಅಂತಾ ಕೇಳಿದರು. ಅದಕ್ಕಾಗಿ ನಾವು ಲೆಕ್ಕಕೊಡಿ ಅಭಿಯಾನ ಆರಂಭಿಸಿದೆವು ಎಂದರು.