ನವದೆಹಲಿ, ಸೆ. 22 (DaijiworldNews/MB) : ದೇಶದಲ್ಲಿ ಐದು ನೂತನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ (ಐಐಐ-ಟಿ) ಸ್ಥಾಪನೆಯನ್ನು ಘೋಷಿಸುವ ಮಸೂದೆ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಸಂಸತ್ತು ಮಂಗಳವಾರ ಅನುಮೋದಿಸಿದೆ.
ಅಗತ್ಯ ಸರಕುಗಳ (ತಿದ್ದುಪಡಿ)ಮಸೂದೆಯನ್ನು ಲೋಕಸಭೆಯಲ್ಲಿ ಸೆಪ್ಟಂಬರ್ 15 ರಂದು ಅಂಗೀಕರಿಸಲಾಗಿದ್ದು ಐಐಐ-ಟಿ ಮಸೂದೆಯನ್ನು ಮಾರ್ಚ್ ತಿಂಗಳಲ್ಲಿ ಲೋಕಸಭೆ ಅಂಗೀಕರಿಸಿತ್ತು. ಇದೀಗ ಈ ಎರಡು ಮಸೂದೆಗಳು ಮಂಗಳವಾರ ಸಂಸತ್ತಿನಲ್ಲಿ ಅಂಗೀಕಾರವಾಗಿದೆ.
ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ ಈ ಐಐಐ-ಟಿಗಳನ್ನು ಕ್ರಮವಾಗಿ ರಾಯಚೂರು, ಸೂರತ್, ಭೋಪಾಲ್, ಭಾಗಲ್ಪುರ ಮತ್ತು ಅಗರ್ತಲಾದಲ್ಲಿ ಸ್ಥಾಪಿಸಲಾಗಿದೆ. ನೂತನ ಐಐಐ-ಟಿಗಳು ಈಗಿರುವ ಇತರೆ 15 ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಐಐಐ-ಟಿಗಳಂತೆ ಬಿ.ಟೆಕ್, ಎಂ.ಟೆಕ್ ಮತ್ತು ಪಿಎಚ್.ಡಿ ಪದವಿ ಕೋರ್ಸ್ ನಡೆಸಬಹುದಾಗಿದೆ.
ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯಂತೆ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು,ಈರುಳ್ಳಿ ಹಾಗೂ ಆಲೂಗಡ್ಡೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ವರದಿ ತಿಳಿಸಿದೆ.