ನವದೆಹಲಿ, ಸೆ. 22(DaijiworldNews/HR): ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲ ಮಾಡಿದ್ದ ಸದಸ್ಯರ ವರ್ತನೆ ಕುರಿತು ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಿಪಡಿಸಿದ್ದು, ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಒಂದು ದಿನ ಉಪವಾಸ ಆಚರಿಸುವುದಾಗಿ ತಿಳಿಸಿದ್ದಾರೆ.
ಸದನದಲ್ಲಿ ನಿನ್ನೆ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ದೆಹಲಿ ರಾಜಕೀಯ ಹೈಡ್ರಾಮ ಮುಂದುವರಿದಿದ್ದು, ಒಂದೆಡೆ ವಿಪಕ್ಷ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ನಿನ್ನೆ ಇದೇ ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಕೂಡ ಉಪವಾಸ ನಿರಶನಕ್ಕೆ ಕೂತಿದ್ದಾರೆ.
ಸದನದಲ್ಲಿ ಆದ ಘಟನೆ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿರುವ ಹರಿವಂಶ್ ಅವರು, ವಿಪಕ್ಷಗಳ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದ್ದು, ತನಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.
ಇನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದರು ಎನ್ನಲಾಗಿದೆ.