ಮುಂಬೈ, ಸೆ. 22 (DaijiworldNews/MB) : ವಿವಾದಾತ್ಮಕ ಕೃಷಿ ಸಂಬಂಧಿತ ಮಸೂದೆಗಳನ್ನು ಅಂಗೀಕರಿಸಿದಾಗ ಗದ್ದಲ ಎಬ್ಬಿಸಿದ ಕಾರಣದಿಂದ ಎಂಟು ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ಒಂದು ದಿನದ ಉಪವಾಸವನ್ನು ಆಚರಿಸುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಎಂಟು ರಾಜ್ಯಸಭಾ ಸದಸ್ಯರ ಅಮಾನತನ್ನು ವಿರೋಧಿಸುತ್ತೇನೆ. ಈ ಹಿನ್ನೆಲೆ ಒಂದು ದಿನದ ಉಪವಾಸವನ್ನು ಆಚರಿಸುತ್ತಿದ್ದೇನೆ. ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರ ಈ ನಡವಳಿಕೆ ಅನುಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸದನದಲ್ಲಿ ವಿರೋಧ ಪಕ್ಷಗಳ ಧ್ವನಿ ಎತ್ತದಂತೆ ನೋಡಿಕೊಳ್ಳುತ್ತಿದ್ದಾರೆ. ಕೃಷಿ ಮಸೂದೆಗೆ ವಿರೋಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಎಂಟು ಸಂಸದರನ್ನು ಹೊರಹಾಕಲಾಗಿದೆ. ಉಪ ಸಭಾಧ್ಯಕ್ಷರು ಸದನದಲ್ಲಿ ಯಾವ ನಿಯಮಗಳನ್ನು ಪಾಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಸೋಮವಾರ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಸಭಾಧ್ಯಕ್ಷ ವೆಂಕಯ್ಯನಾಯ್ಡು ಅವರು ಒಂದು ವಾರ ಅಮಾನತುಗೊಳಿಸಿದ್ದು ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಸಂಕೀರ್ಣದ ಲಾನ್ನಲ್ಲಿ ಕುಳಿತು ತಮ್ಮ ಧರಣಿ ನಡೆಸುತ್ತಿದ್ದಾರೆ. ಇತ್ತ ಅಮಾನತನ್ನು ಹಿಂಪಡೆಯುವವರೆಗೂ ವಿಪಕ್ಷಗಳು ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಲಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ತಿಳಿಸಿದ್ದಾರೆ. ಇನ್ನು ಸಂಸದರ ವರ್ತನೆಯಿಂದ ರಾತ್ರಿಯಿಡೀ ನಿದ್ದೆ ಮಾಡಿಲ್ಲ, ಒಂದು ದಿನ ಉಪವಾಸ ಆಚರಿಸುತ್ತೇನೆ ಎಂದು ಉಪಸಭಾಪತಿ ಹರಿವಂಶ್ ಅವರು ರಾಜ್ಯ ಸಭೆ ಸದಸ್ಯರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.