ಬೆಂಗಳೂರು,ಸೆ. 22(DaijiworldNews/HR): ದೇಶದ ರೈತರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕೃಷಿ ಮಸೂದೆ ಅಂಗೀಕರಿಸಿದೆ. ಇದು ಸ್ವಾಗತಾರ್ಹವಾಗಿದ್ದು, ರೈತರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್, ಈ ಕಾಯ್ದೆಯಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ರೈತನಿಗೆ ಅನೇಕ ರೀತಿಯ ಚಾರ್ಜ್ ಹಾಕಲಾಗುತ್ತಿತ್ತು. ಅಷ್ಟೆ ಅಲ್ಲದೇ ರೈತರು ಶೋಷಣೆಗೊಳಗಾಗುತ್ತಿದ್ದರು. ವ್ಯಾಪಾರಿಗಳು ಶಾಮೀಲಾಗಿ ರೈತರಿಂದ ಹೆಚ್ಚು ದಳ್ಳಾಳಿ ಶುಲ್ಕ ವಸೂಲಿ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿದೆ ಎಂದರು.
ಬಳಿಕ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ಈ ಕಾಯ್ದೆ ತಿದ್ದುಪಡಿ ಬಗ್ಗೆ ಯಾವುದೇ ರೈತರು ವಿರೋಧ ಮಾಡಿಲ್ಲ. ಈಗ ರೈತ ತನ್ನ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತನಿಗೆ ಒಳ್ಳೆಯ ಬೆಲೆ ದೊರೆತರೆ ಎಲ್ಲಿಯಾದರೂ ಮಾರಲಿ. 50 ಮಲ್ಟಿ ನ್ಯಾಷನಲ್ ಕಂಪನಿಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ167 ಎಪಿಎಂಸಿ ಇವೆ. ಯಾವುದೇ ಎಪಿಎಂಸಿಯಲ್ಲಿ ಯಾವ ಬೆಲೆಗೆ ಮಾರಾಟ ಆಗುತ್ತದೆ ಎನ್ನುವ ಮಾಹಿತಿ ಎಲ್ಲರಿಗೂ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.