ನವದೆಹಲಿ, ಸೆ 22(Daijiworld News/PY): ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರಕ್ಕೆ ತೀವ್ರ ವಿರೋಧ ಪಡಿಸಿದ್ದ ಹಿನ್ನೆಲೆ ಅಮಾನತುಗೊಂಡಿರುವ 8 ರಾಜ್ಯಸಭಾ ಸದಸ್ಯರು ಕ್ಷಮೆ ಕೋರಿದಲ್ಲಿ ಮಾತ್ರವೇ ಅವರ ವಿರುದ್ದದ ಅಮಾನತನ್ನು ವಾಪಾಸ್ಸು ಪಡೆಯಲು ಸರ್ಕಾರ ಪರಿಗಣಿಸಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಎಂಟು ಸದಸ್ಯರ ವಿರುದ್ದದ ಅಮಾನತನ್ನು ವಾಪಾಸ್ಸು ಪಡೆದುಕೊಳ್ಳಬೇಕು ಎಂದು ಸಭಾತ್ಯಾಗ ಮಾಡಿದ ಬಳಿಕ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ಹೇಳಿಕೆ ನೀಡಿದ್ದಾರೆ.
ಅಮಾನತುಗೊಂಡಿರುವ ಎಂಟು ಸದಸ್ಯರು ತಾವು ರಾಜ್ಯಸಭೆಯಲ್ಲಿ ತೋರಿದ್ದ ವರ್ತನೆಯ ಬಗ್ಗೆ ಕ್ಷಮೆ ಕೇಳಿದರೆ ಅಮಾನತನ್ನು ವಾಪಾಸ್ಸು ಪಡೆಯಲಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಅಲ್ಲದೇ ಗದ್ದಲ ಉಂಟಾಗಿದ್ದು, ಈ ಸಂಬಂಧ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ.
ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ.