ಮುಂಬೈ, ಸೆ 22(Daijiworld News/PY): ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಆರೋಪದ ಮೇಲೆ ಎನ್ಸಿಬಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ನ್ಯಾಯಾಂಗ ಬಂಧನ ಅಕ್ಟೋಬರ್ 6ರವರೆಗೂ ವಿಸ್ತರಣೆಯಾಗಿದೆ.
ರಿಯಾ ಚಕ್ರವರ್ತಿ ಅವರನ್ನು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಮಂಗಳವಾರ ಬಂಧಿಸಲಾಗಿದ್ದು, ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.ವಿಶೇಷ ನ್ಯಾಯಾಲಯ ರಿಯಾ ಅವರ ನ್ಯಾಯಾಂಗ ವಿಸ್ತರಿಸಿದ್ದು, ಮಂಗಳವಾರ ಆದೇಶ ಹೊರಡಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಸಹೋದರ ಶೋಯಿಕ್ ಚಕ್ರವರ್ತಿ ಹಾಗೂ ಇತರ ನಾಲ್ವರು ಆರೋಪಿಗಳು ಕೂಡಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸೆ.23ರಂದು ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ರಿಯಾ ಅವರ ಪರ ವಕೀಲ ಸತೀಶ್ ಮಾನಶಿಂದೆ ಮಾಹಿತಿ ನೀಡಿದ್ದಾರೆ.
ಜುಲೈ 25ರಂದು ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ರಿಯಾ ಸೇರಿದಂತೆ ಅವರ ಕುಟುಂಬದ ವಿರುದ್ದ ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ರಿಯಾ ಸೇರಿದಂತೆ ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾ ಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿ, ಸ್ಯಾಮುವೆಲ್ ಮಿರಾಂಡಾ ಹಾಗೂ ಶೃತಿ ಮೋದಿ ವಿರುದ್ದ ಎಫ್ಐಆರ್ ದಾಖಲಿಸಿದ್ದು, ಈ ಬಗ್ಗೆ ಸಿಬಿಐ ಹಾಗೂ ಎನ್ಸಿಬಿಯಿಂದ ತನಿಖೆ ನಡೆಯುತ್ತಿದೆ.