ಮೈಸೂರು, ಸೆ. 22 (DaijiworldNews/MB) : ಕಳೆದ ಬಾರಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಹಿಷ ದಸರಾ ಆಚರಣೆಯನ್ನು ಈ ಬಾರಿಯೂ ಮಾಡುತ್ತೇವೆ, ತಾಕತ್ತಿದ್ದರೆ ತಡೆಯಿರಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರರಿಗೆ ಪ್ರಗತಿಪರರು ಸವಾಲೆಸೆದಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಮಹೇಶ್ ಚಂದ್ರಗುರು, ಶಾಂತರಾಜು, ಪುರುಷೋತ್ತಮ್ ಮತ್ತು ಮಹದೇವಮೂರ್ತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
''ಯಾರ ಭಾವನೆಗಳಿಗೂ ನಾವು ಧಕ್ಕೆ ಉಂಟು ಮಾಡುವುದಿಲ್ಲ. ಕಳೆದ ಆರು ವರ್ಷಗಳಿಂದ ನಾವು ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಆದರೆ ಕಳೆದ ವರ್ಷ ಸಂಸದ ಪ್ರತಾಪ್ ಸಿಂಹ ಆಚರಣೆಗೆ ಅಡ್ಡಿ ಮಾಡಿ ಈ ನೆಲದ ಮೂಲ ನಿವಾಸಿಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇತಿಹಾಸ ತಿಳಿಯದ ಶಾಸಕ ಎಲ್ ನಾಗೇಂದ್ರ ಅವರು ಎಷ್ಟು ವರ್ಷದಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನಾವೀಗ ಇವರಿಗೆ ಇತಿಹಾಸ ತಿಳಿಸುವ ಕಾರ್ಯ ಮಾಡಬೇಕಾಗಿದ್ದು ಅವರು ಚರ್ಚೆಗೆ ಬರಲಿ'' ಎಂದು ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಹೇಳಿದರು.
''ದೇಶದ ಮೂಲ ನಿವಾಸಿಗಳ ರಾಜ ಮಹಿಷ. ಅವರ ಇತಿಹಾಸ ತಿಳಿದು ಅವರು ಹಬ್ಬ ಆಚರಿಸುತ್ತಾರೆ. ಇಷ್ಟವಿದ್ದವರು ಭಾಗವಹಿಸಬಹುದು, ಇಲ್ಲದಿದ್ದರೆ ಬಾಯಿಮುಚ್ಚಿ ಸುಮ್ಮನಿರಬೇಕು. ಮೂಲ ನಿವಾಸಿಗಳಾದ ನಮ್ಮ ಆಚರಣೆಗೆ ಧಕ್ಕೆ ಉಂಟು ಮಾಡಿದರೆ ನಾವು ಸುಮ್ಮನಿರಲ್ಲ'' ಎಂದು ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.