ಬೆಂಗಳೂರು, ಸೆ. 23 (DaijiworldNews/MB) : ಎಚ್.ವಿಶ್ವನಾಥ್ ಅವರನ್ನು ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು ವಿಶ್ವನಾಥ್ ಅವರಿಗೂ ನೋಟಿಸ್ ನೀಡಲು ಆದೇಶಿಸಿದೆ.
ಅರ್ಜಿದಾರರಾದ ಸಾಮಾಜಿಕ ಹೋರಾಟಗಾರ ಎಸ್.ರುಕ್ಮಾಂಗದ ಅವರು, 17 ಶಾಸಕರನ್ನು ಕೆ.ಆರ್. ರಮೇಶ್ಕುಮಾರ್ ಅವರು ಅನರ್ಹಗೊಳಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು ಎಂದು ತಿಳಿಸಿತ್ತು. ಅದರಂತೆ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆಗಿಳಿದ ವಿಶ್ವನಾಥ್ ಅವರು ಸೋಲು ಕಂಡಿದ್ದಾರೆ. ಸಂವಿಧಾನದ ಪರಿಚ್ಛೇದ 171(5) ಪ್ರಕಾರ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶಿತರಾಗಲು ವಿಶ್ವನಾಥ್ ಅನರ್ಹರು ಎಂದು ತಿಳಿಸಿದ್ದು ಪ್ರಸ್ತುತ ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಿನಂತಿಸಿದರು.
ಸಾಂವಿಧಾನಿಕ ನಿಬಂಧನೆಗಳನ್ನು ಒಳಗೊಂಡಿರುವ ವಿಷಯ ಇದಾದ ಹಿನ್ನೆಲೆ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ಬದಲಾಗಿ ಪ್ರತಿವಾದಿಗಳ ಹೇಳಿಕೆ ಪರಿಶೀಲಿಸಲಾಗುತ್ತದೆ ಎಂದು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾಮಾಜಿಕ ಹೋರಾಟಗಾರ ಎಸ್.ರುಕ್ಮಾಂಗದ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.