ಬೆಂಗಳೂರು, ಸೆ. 23 (DaijiworldNews/MB) : ರಾಜ್ಯ ಸರ್ಕಾರವು ಜೆಡಿಎಸ್ ವರಿಷ್ಠ, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರ ಓಡಾಟಕ್ಕೆ 60 ಲಕ್ಷ ರೂ. ಯ ವೊಲ್ವೊ ಹೊಸ ಕಾರು ಒದಗಿಸಿದ್ದು ರಾಜ್ಯದಲ್ಲೇ ಅತೀ ದುಬಾರಿ ಸರ್ಕಾರಿ ಕಾರು ಹೊಂದಿರುವವರು ಈಗ ದೇವೇಗೌಡರಾಗಿದ್ದಾರೆ.
ತಾನು ರಾಜ್ಯ ಸಭೆ ಸದಸ್ಯರಾದ ಬಳಿಕ ಕಾರು ಒದಗಿಸುವಂತೆ ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು ಇದನ್ನು ಬಿಎಸ್ವೈ ಅನುಮೋದಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಹೆಸರಲ್ಲಿ ನೋಂದಣಿಯಾಗಿರುವ ಈ ಹೊಸ ಕಾರನ್ನು ತಿಂಗಳ ಹಿಂದೆಯಷ್ಟೆ ದೇವೇಗೌಡ ಅವರಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಇನ್ನು ದೇವೇಗೌಡರು ಇದೇ ಕಾರು ಬೇಕೆಂದು ಕೇಳಿರಲಿಲ್ಲ ಆದರೆ ಸರ್ಕಾರವೇ ಈ ಹೊಸ ಕಾರನ್ನು ನೀಡಿದೆ ಎಂದು ಕೂಡಾ ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು, ವೊಲ್ವೊ ಎಕ್ಸ್ಸಿ60ಡಿ5 ಮಾಡೆಲ್ ಕಾರಿನ ಮೂಲ ಬೆಲೆ ರೂ. 59.90 ಲಕ್ಷವಾಗಿದ್ದು ತೆರಿಗೆ, ವಿಮೆ ಮೊತ್ತಗಳೆಲ್ಲಾ ಸೇರಿ ರೂ. 74.90 ಲಕ್ಷವಾಗುತ್ತದೆ. ಆದರೆ ಈ ಕಾರು ಸರ್ಕಾರದ ಹೆಸರಿನಲ್ಲಿ ಖರೀದಿಸುವ ಕಾರಣ ತೆರಿಗೆ ಇಲ್ಲ. ಹಾಗಾಗಿ ಈ ಕಾರಿನ ಬೆಲೆ ರೂ. 60 ಲಕ್ಷದಿಂದ ರೂ. 65 ಲಕ್ಷ ಆಗಿರಬಹುದು ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಬಳಿ ಎರಡು ಫಾರ್ಚ್ಯೂನರ್ ಕಾರುಗಳಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ವಿಧಾನಸಭಾ ಸಚಿವಾಲಯದಿಂದ ಫಾರ್ಚ್ಯೂನರ್ ಕಾರು ಒದಗಿಸಲಾಗಿದೆ.