ಬೆಂಗಳೂರು, ಸೆ. 23 (DaijiworldNews/MB) : ಕೊರೊನಾ ಸಂಕಷ್ಟದ ಕಾರಣದಿಂದಾಗಿ ಸಚಿವರು, ಶಾಸಕರು ಸೇರಿದಂತೆ ವಿಧಾನಸಭೆ ಸದಸ್ಯರ ಶೇ.30ರಷ್ಟು ವೇತನ ಕಡಿತ ಮಾಡುವ ಸಂಬಂಧ ಸಂಬಳಗಳು, ನಿವೃತ್ತಿ ವೇತನ, ಭತ್ಯೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ಅನುಮೋದಿಸಲಾಗಿದೆ, ಹಾಗೆಯೇ 8 ವಿಧೇಯಕಗಳನ್ನು ಮಂಡಿಸಲಾಗಿದೆ.
ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಅವರು, ನ್ಯಾಯಾಂಗ ಇಲಾಖೆಯಲ್ಲಿ ವೇತನ ಪರಿಷ್ಕರಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ''ಶಾಸಕಾಂಗದ ಒಪ್ಪಿಗೆ ಪಡೆಯದೆಯೇ ನ್ಯಾಯಾಂಗ ಅಧಿಕಾರಿಗಳು ತಮ್ಮ ವೇತನ ತಾವೇ ಹೆಚ್ಚಿಸಿಕೊಂಡು ಬಳಿಕ ಸರ್ಕಾರ ಇದಕ್ಕೆ ಅದಕ್ಕೆ ಅನುಮತಿ ನೀಡಿದೆ. ಆದರೆ ಅಧಿಕಾರಿಗಳಿಗೆ ಈ ಅಧಿಕಾರ ಕೊಟ್ಟವರು ಯಾರು'' ಎಂದು ಪ್ರಶ್ನಿಸಿದ್ದಾರೆ.
''ಕೊರೊನಾ ಕಾರಣದಿಂದಾಗಿ ನಮ್ಮ ಭತ್ಯೆ ಕಡಿತ ಮಾಡುವುದಕ್ಕೆ ನಮಗೆ ಯಾವ ವಿರೋಧವೂ ಇಲ್ಲ. ಆದರೆ ನ್ಯಾಯಾಂಗ ಅಧಿಕಾರಿಗಳಿಗೂ ಕೂಡಾ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ವೇತನ ಕಡಿಮೆ ಮಾಡಬೇಕು. ಆದರೆ ಅವರು ಶಾಸಕಾಂಗದ ಒಪ್ಪಿಗೆಯನ್ನೂ ಕೂಡಾ ಪಡೆಯದೆ ತಮ್ಮಗೆ ಮನ ಬಂದಂತೆ ವೇತನವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಸರ್ಕಾರ ಬಳಿಕ ಅನುಮೋದನೆಯನ್ನೂ ನೀಡುತ್ತದೆ. ಸರ್ಕಾರವೇನು ಬಲಹೀನವಾಗಿದೆಯೇ'' ಎಂದು ಆಕ್ರೋಶಗೊಂಡರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರು, ''ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಉತ್ತರ ನೀಡಲು ಸಾಧ್ಯವಿಲ್ಲ. ಎಲ್ಲ ಮಾಹಿತಿಯನ್ನು ಕಲೆ ಹಾಕಿ ಉತ್ತರಿಸುತ್ತೇನೆ'' ಎಂದು ತಿಳಿಸಿದ್ದಾರೆ.