ಬೆಂಗಳೂರು, ಸೆ 23(Daijiworld News/PY): ಮಕ್ಕಳಿಂದ ನಗರದ ಟ್ರಾಫಿಕ್ ಜಂಕ್ಷನ್ಗಳಲ್ಲಿ ಹೂವು, ಆಟಿಕೆ ಮುಂತಾದ ಸಾಮಾಗ್ರಿಗಳನ್ನು ಮಾರಾಟ ಮಾಡಿಸುವುದನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧಾರಿಸಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ನ್ಯಾಯಮೂರ್ತಿ ಎ.ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ಲೆಟ್ಜ್ಕಿಟ್ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಬಿಬಿಎಂಪಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಸ್ತುತ ವರ್ಷದ ಮೇ 19ರ ಬಳಿಕ ವಾಹನ ಸಂಚಾರ ಸೇರಿದಂತೆ ಎಲ್ಲಾ ವಹಿವಾಟುಗಳು ಪ್ರಾರಂಭವಾಗಿದ್ದು, ಈ ನಡುವೆ ಆಟಿಕೆ, ಹೂ ಮಾರಾಟ ಮಾಡುವ ಹಾಗೂ ಭಿಕ್ಷೆ ಬೇಡುವ ಮಕ್ಕಳು ಪುನಃ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು. ಅಲ್ಲದೇ, ಆ ಮಕ್ಕಳಿಗೆ ಆಶ್ರಯ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.