ಮುಂಬೈ, ಸೆ. 23 (DaijiworldNews/MB) : ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37 ಕ್ಕೆ ಏರಿದೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್ಡಿಆರ್ಎಫ್) ಬುಧವಾರ ತಿಳಿಸಿದೆ.
ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 3.30ರ ಸಮಯದಲ್ಲಿ ಮೂರು ಮಹಡಿ ಕಟ್ಟಡ ಕುಸಿದಿದ್ದು ಸ್ಥಳಕ್ಕೆ ಧೌಡಾಯಿಸಿದ ಎನ್ಡಿಆರ್ಎಫ್ ಸಿಬ್ಬಂದಿಗಳು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈವರೆಗೆ 37 ಮಂದಿಯ ಮೃತದೇಹ ದೊರೆತಿದ್ದು 20 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದರು. ಬಳಿಕ ಐವರನ್ನು ಎನ್ಡಿಆರ್ಎಫ್ ಸಿಬ್ಬಂದಿಗಳು ರಕ್ಷಿಸಿದ್ದು ಈವರೆಗೆ 25 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಹೇಳಲಾಗಿದೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ.