ನವದೆಹಲಿ, ಸೆ. 23 (DaijiworldNews/MB) : ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕಾರ ಮಾಡಿರುವುದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ಹಲವು ಮಸೂದೆಗಳನ್ನು ಅಂಗೀಕಾರ ಮಾಡಿ ಇನ್ನು ಎಂಟು ದಿನಗಳು ಬಾಕಿಯಿರುವಾಗಲೇ ರಾಜ್ಯಸಭಾ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆ, ವಿದೇಶಿ ದೇಣಿಗೆ(ನಿಯಂತ್ರಣ) ತಿದ್ದುಪಡಿ ಮಸೂದೆಗೆ ಅಂಗೀಕರಿಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಕಲಾಪದಿಂದ 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿರುವುದನ್ನು ಪ್ರತಿಭಟಿಸಿ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು ಇದನ್ನೇ ಲಾಭವನ್ನಾಗಿಸಿದ ಕೇಂದ್ರ ಸರ್ಕಾರ ಮಂಗಳವಾರ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ರಾಜ್ಯಸಭೆಯಲ್ಲಿ ಕೇವಲ ಮೂರು ಗಂಟೆಯಲ್ಲಿ ದಾಖಲೆಯ 9 ಮಸೂದೆಗಳನ್ನು ಅನುಮೋದಿಸಿತ್ತು. ಬುಧವಾರ ಐದು ಮಸೂದೆಗಳನ್ನು ಅನುಮೋದಿಸಿ ಬಳಿಕ ಕಲಾಪವನ್ನು ಮುಂದೂಡಿದೆ.
ಸೆಪ್ಟೆಂಬರ್ 14 ರಂದು ಆರಂಭವಾದ ಮುಂಗಾರು ಅಧಿವೇಶನವು ಅಕ್ಟೋಬರ್ 1ಕ್ಕೆ ಅಂತ್ಯಗೊಳ್ಳಬೇಕಿದ್ದು ಆರಂಭದ ಬಳಿಕ ಲೋಕ ಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಹಲವಾರು ಮಸೂದೆಗಳನ್ನು ತರಾತುರಿಯಲ್ಲಿ ಅನುಮೋದಿಸಲಾಗಿದೆ. ಇದರಲ್ಲಿ ಹಲವು ಸುಗ್ರೀವಾಜ್ಞೆಗಳು ಕೂಡಾ ಒಳಗೊಂಡಿದೆ.
ಇನ್ನು ಕೃಷಿ ಮಸೂದೆಗಳ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು ರೈತರು ಬೀದಿಗಿಳಿದು ಪ್ರತಿಭಟನೆ ಮುಂದುವರಿಸಿದ್ದಾರೆ.