ಬೆಂಗಳೂರು, ಸೆ. 23 (DaijiworldNews/MB) : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಗೆ ಸಂಬಂಧಿಸಿ ಎರಡನೇ ಬಾರಿ ಸಿಸಿಬಿ ವಿಚಾರಣೆಗೆ ಹಾಜರಾದ ನಟ ದಿಗಂತ್, ಮತ್ತೆ ಕರೆದರೂ ಬರುತ್ತೇನೆ, ತನಿಖೆಗೆ ನನ್ನ ಸಹಕಾರವಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೆಚ್ಎಂಟಿ ಬಳಿ "ಮಾರಿಗೋಲ್ಡ್ " ಸಿನಿಮಾದ ಚಿತ್ರೀಕರಣದಲ್ಲಿದ್ದ ದಿಗಂತ್ ಅಲ್ಲಿಂದಲ್ಲೇ ನೇರವಾಗಿ ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದು ವಿಚಾರಣೆ ಮುಗಿಸಿದ ಬಳಿಕ ಮಾತನಾಡಿದ ಅವರು, ನನ್ನ ಬಳಿ ಇರುವ ಅಗತ್ಯ ಮಾಹಿತಿಗಳನ್ನು ಸಿಸಿಬಿಗೆ ನೀಡಿದ್ದು ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ. ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇನೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು ನಾನು ಯಾವುದೇ ಮಾಹಿತಿಯನ್ನು ಮಾಧ್ಯಮಕ್ಕೆ ತಿಳಿಸುವಂತಿಲ್ಲ ಎಂದು ಹೇಳಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ, ಸಂಜನಾ ವಿಚಾರಣೆ ನಡೆಯುತ್ತಿದ್ದು ಇಬ್ಬರು ಜೈಲಿನಲ್ಲಿದ್ದಾರೆ. ಹಾಗೆಯೇ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 24 ಕ್ಕೆ ಕೋರ್ಟ್ ಮುಂದೂಡಿದೆ.
ಈ ನಡುವೆ ಒಂದು ವಾರದ ಹಿಂದಯಷ್ಟೇ ನಟ ದಿಗಂತ್ ಹಾಗೂ ಅವರ ಪತ್ನಿ ನಟಿ ಐಂದ್ರಿತಾ ರೇ ಅವರಿಗೆ ನೋಟಿಸ್ ನೀಡಿದ ಸಿಸಿಬಿ ವಿಚಾರಣೆ ನಡೆಸಿತ್ತು. ಬಳಿಕ ಇಂದು ವಿಚಾರಣೆಗೆ ಹಾಜರಾಗುವಂತೆ ನಟ ದಿಗಂತ್ಗೆ ಮತ್ತೆ ನೋಟಿಸ್ ನೀಡಿತ್ತು.