ನವದೆಹಲಿ, ಸೆ. 23 (DaijiworldNews/SM): ಕೇಂದ್ರದ ರೈಲ್ವೇ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ(65) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಸಪ್ಟೆಂಬರ್ 11ರಂದು ಸುರೇಶ್ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟ ಬಗ್ಗೆ ತಿಳಿಸಿದ್ದರು. ಬಳಿಕ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಂಗಡಿ ಸಂಸದರಾಗಿ ಆಯ್ಕೆಯಾಗಿದ್ದರು. 2004, 2009, 2014, 2019ರಲ್ಲಿ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಆದರೆ, ಮತ್ತೆ ಇಂದು ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು, ಆದರೆ ಇಂದು ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಇನ್ನು 1955ರ ಜೂನ್ 1ರಂದು ಸುರೇಶ್ ಅಂಗಡಿ ಜನಿಸಿದ್ದರು. ಬೆಳಗಾವಿ ಎಸ್ ಎಸ್ ಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಮಂಗಳಾ ಅಂಗಡಿ ಜೊತೆ ವಿವಾಹವಾಗಿದ್ದರು.