ಮುಂಬೈ, ಸೆ. 24 (DaijiworldNews/MB) : ನಟಿ ಕಂಗನಾ ರಣಾವತ್ ಕಾನೂನು ಮೀರಿಲ್ಲ. ಅವರು ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಹೇಳಿದರೆ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಕಂಗನಾ ವಿಚಾರಣೆ ನಡೆಸಲಿ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಂಗನಾ ಅವರು ನಾನು ಮಾದಕ ವ್ಯಸನಿ ಎಂದು ಹೇಳಿದರೆ ಎನ್ಸಿಬಿ ತನಿಖೆ ನಡೆಸಬೇಕು. ನಮ್ಮ ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಕಂಗನಾ ವಿರುದ್ದವೂ ತನಿಖೆ ನಡೆಯಲಿ ಎಂದು ಹೇಳಿದರು.
ಕಂಗನಾ ರಣಾವತ್ ಡ್ರಗ್ಸ್ ಸೇವಿಸುತ್ತಾರೆ ಎಂದು ನಟ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ಆರೋಪಿಸಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸರಿಗೆ ತಿಳಿಸಿದೆ.
ಇನ್ನು ಬಾಲಿವುಡ್ ಡ್ರಗ್ಸ್ ಸಂಬಂಧದ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದ್ದು ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ರಿಯಾ ಪ್ರಿಯಕರ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಬಿಐ ಆ ಪ್ರಕರಣದ ತನಿಖೆ ನಡೆಸುತ್ತಿದೆ. ಈ ನಡುವೆ ಎನ್ಸಿಬಿ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರನ್ನು ವಿಚಾರಣೆಗೆ ಕರೆದಿದೆ.