ನವದೆಹಲಿ, ಸೆ. 24 (DaijiworldNews/MB) : ಕೊರೊನಾ ಸೋಂಕು ದೃಢಪಟ್ಟ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಬೆಳಗಾವಿಗೆ ತರಲು ಕೊರೊನಾ ನಿಯಮಗಳು ಅಡ್ಡಿಯಾಗಿದ್ದು ಈ ಹಿನ್ನೆಲೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದೆಹಲಿಯಲ್ಲೇ ಗುರುವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಕೊರೊನಾ ನಿಯಾಮಾವಳಿಗಳ ಪ್ರಕಾರವಾಗಿ ಸೋಂಕು ದೃಢಪಟ್ಟ ವ್ಯಕ್ತಿ ಎಲ್ಲ ಮೃತಪಡುತ್ತಾರೋ ಅಲ್ಲೇ ಅವರ ಮೃತದೇಹದ ಅಂತ್ಯಕ್ರಿಯೆ ನಡೆಸಬೇಕಾಗಿದೆ.
ಪಾರ್ಥಿವ ಶರೀರವನ್ನು ಬೆಳಗಾವಿಗೆ ಕೊಂಡೊಯ್ಯಲು ನಿಯಮ ಪ್ರಕಾರವಾಗಿ ಸಾಧ್ಯವಿಲ್ಲ ಎಂದು ಏಮ್ಸ್ ವೈದ್ಯರು ಹೇಳಿದ್ದು ಕೊರೊನಾ ನಿಯಮಾವಳಿಯನ್ನು ಇದ್ದಕ್ಕಿದ್ದಂತೆ ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಸಂಬಂಧಿಕರನ್ನು ದೆಹಲಿಗೆ ಬರುವಂತೆ ಸೂಚಿಸಲಾಗಿದ್ದು ದೆಹಲಿ ಲೋಧಿ ಎಸ್ಟೇಟ್ನಲ್ಲಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.