ಬೆಂಗಳೂರು, ಸೆ. 24 (DaijiworldNews/MB) : ಕೊರೊನಾ ಸಾವಿನ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬುಧವಾರ ಮಾಹಿತಿ ನೀಡಿದ್ದಾರೆ.
ಬುಧವಾರ ಕೊರೊನಾ ಸೋಂಕು ನಿಯಂತ್ರಣ ಕುರಿತಾಗಿ ಪ್ರಧಾನಿ ಮೋದಿಯವರು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ್ದು ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ವೈ ಅವರು ರಾಜ್ಯದ ಕೊರೊನಾ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುವವರ ಪ್ರಮಾಣ ಕಡಿಮೆಯಾಗುತ್ತಿದ್ದು ಜುಲೈ ತಿಂಗಳಿನಲ್ಲಿ ಶೇ.2.6ರಷ್ಟಿದ್ದ ಸಾವಿನ ಪ್ರಮಾಣ ಇದೀಗ ಶೇ.1.54ಕ್ಕೆ ಇಳಿದಿದೆ. ರಾಜ್ಯದಲ್ಲಿ ಒಟ್ಟು 136 ಪರೀಕ್ಷಾ ಪ್ರಯೋಗಾಲಯಗಳಿದ್ದು ಪ್ರತಿದಿನ 70,000 ಸ್ಯಾಂಪಲ್ಸ್ಗಳ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ಸುಮಾರು 43 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ರೋಗ ಲಕ್ಷಣ ಇರುವವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಿ 24 ರಿಂದ 48 ಗಂಟೆಗಳಲ್ಲಿ ಅವರ ಸಂಪರ್ಕವನ್ನು ಗುರುತಿಸಲಾಗುತ್ತದೆ. ರೋಗಿಗಳಿಗೆ ರೆಮ್ಡೆಸಿವಿರ್ ಸೇರಿದಂತೆ ಇತರೆ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಒಟ್ಟು 2,000 ಆಂಬುಲೆನ್ಸ್ಗಳು ರಾಜ್ಯದಲ್ಲಿದೆ. ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ಇನ್ನೂ ಕೂಡಾ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.