ಬೆಂಗಳೂರು, ಸೆ. 24 (DaijiworldNews/MB) : ಭ್ರಷ್ಟಾಚಾರ ಮಾಡಿರುವ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಗ, ಮೊಮ್ಮಗ, ಅಳಿಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದು ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದು ಹೇಳಿದರು.
ಬಿಎಸ್ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ನಾಲ್ಕು ತಿಂಗಳಲ್ಲಿ ರಾಜ್ಯದ ಸ್ಥಿತಿ ಅಧೋಗತಿಗೆ ತಲುಪಿದೆ. ಈ ಸರ್ಕಾರ ಕೋಟ್ಯಾಂತರ ರೂಪಾಯಿ ಸಾಲ ಮಾಡಿದೆ ಎಂದು ಸರ್ಕಾರದ ವಿರುದ್ದ ಸಿಡಿಮಿಡಿಗೊಂಡರು.
ರಾಜ್ಯದಲ್ಲಿ ವೈದ್ಯಕೀಯ ಉಪಕರಣ, ಲ್ಯಾಪ್ಟಾಪ್, ವಿದ್ಯುತ್ ಪರಿವರ್ತಕ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದೆಡೆ ಅಭಿವೃದ್ದಿ ಕುಂಠಿತವಾದರೆ ಇನ್ನೊಂದೆಡೆ ಆರ್ಥಿಕ ದುಸ್ಥಿತಿಗೆ ತಲುಪುತ್ತಿದೆ. ಅಷ್ಟೇ ಅಲ್ಲದೆ ಇದರ ಮಧ್ಯೆ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದಿದ್ದಾರೆ ಎಂದು ಆರೋಪ ಮಾಡಿದರು.