ತಿರುವನಂತಪುರಂ, ಸೆ 24(DaijiworldNews/PY): ಕೊರೊನಾದ ಆರಂಭದ ಹಂತದಲ್ಲಿದ್ದ ಮುಂಜಾಗ್ರತೆಗಳನ್ನು ಈಗ ನಿರ್ಲಕ್ಷ್ಯಿಸಲಾಗುತ್ತಿದೆ. ಪ್ರತಿ ಪಕ್ಷಗಳು ಹೋರಾಟದ ಹೆಸರಿನಲ್ಲಿ ಕೊರೊನಾ ನಿಯಂತ್ರಣಗಳನ್ನು ತಪ್ಪಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕೊರೊನಾ ರಕ್ಷಣೆಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಅಲ್ಲದೇ ಇದೀಗ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತದೆ ಎಂದು ತಿಳಿಸಿದರು.
ಹಲವು ದಿನಗಳಿಂದ ತಿರುವನಂತಪುರದಲ್ಲಿ ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ವಿವಿಧ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವಿಚಾರವಾಗಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸಲು ಜನಸಂದಣಿಯನ್ನು ತಪ್ಪಿಸುವುದೇ ಮುಖ್ಯವಾದ ಕಾರ್ಯ. ಆದರೆ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಈ ರೀತಿಯಾದ ಪ್ರತಿಭಟನೆ ಮಾಡಿದರೆ ಕೊರೊನಾ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಿಯೋಜನೆ ಮಾಡಿರುವ ಪೊಲೀಸ್ ಅಧಿಕಾರಿಗಳೂ ಕೂಡಾ ಕೊರೊನಾಕ್ಕೆ ತುತ್ತಾಗಿರುವುದು ಆತಂಕವಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಿಯೋಜಿತರಾದ 101 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಿದರು.
ಪ್ರತಿಭಟನಾಕಾರರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ಅಪಾಯವಿದೆ. ಕೊರೊನಾ ಸಂದರ್ಭ ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.