ಬೆಂಗಳೂರು, ಸೆ. 24 (DaijiworldNews/MB) : ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಓರ್ವರಾದ ರಾಕ್ ಲೈನ್ ಸುಧಾಕರ್ ಅವರು ಶೂಟಿಂಗ್ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಶುಗರ್ ಲೆಸ್ ಕನ್ನಡ ಸಿನಿಮಾದ ಚಿತ್ರೀಕರಣದ ವೇಳೆ ಸೆಟ್ನಲ್ಲಿಯೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
64 ವರ್ಷದ ಸುಧಾಕರ್ ಅವರು ಬೆಂಗಳೂರಿನ ಕಮಲಾನಗರದ ನಿವಾಸಿ ಆಗಿದ್ದು ಅವರಿಗೆ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಅವರು ಗುಣಮುಖರಾಗಿದ್ದರು.
120 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್ ಅವರು ಡಕೋಟಾ ಎಕ್ಸ್ ಪ್ರೆಸ್ ಸಿನಿಮಾದ ಮೂಲಕ ತಮ್ಮ ನಟನಾ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಪಂಚರಂಗಿ, ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ, ಜೂಮ್, ಟೋಪಿವಾಲಾ, ಕೆಮಿಸ್ಟ್ರಿ ಆಫ್ ಕರಿಯಪ್ಪ ಇನ್ನೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿರುವ ನಿರ್ದೇಶಕ ಸುನಿ ಅವರು, 2020ಯ ರೌದ್ರಾವತಾರ ಮುಂದುವರೆದಿದೆ.. ಸಿನಿಕಲಾವಿದರಾದ #Rocklinesudhakar ರವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ... ಓಂ ಶಾಂತಿ ಎಂದಿದ್ದಾರೆ.