ಜೈಪುರ, ಸೆ 24(DaijiworldNews/PY): ಮಹಿಳೆಯೋರ್ವಳು ತನ್ನ ಪತಿಯನ್ನು ಹತ್ಯೆಗೈದು ಮೃತದೇಹವನ್ನು ಹಾಸಿಗೆಯ ಕೆಳಗೆ ಸುಮಾರು 28 ಗಂಟೆಗಳ ಕಾಲ ಇಟ್ಟುಕೊಂಡಿದ್ದ ಘಟನೆ ರಾಜಸ್ಥಾನದ ಹಮಿರ್ವಾಸ್ ಪಟ್ಟಣದ ಸಂಖದ್ದಾಲ್ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ವ್ಯಕ್ತಿಯನ್ನು ನಿರ್ಮಲ್ ಸಿಮಗ್ ಎಂದು ಗುರುತಿಸಲಾಗಿದೆ.
ನೀರಜಾ ಹಾಗೂ ನಿರ್ಮಲ್ ಸಿಂಗ್ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಅದರಂತೆ ಎರಡು ದಿನಗಳ ಹಿಂದೆಯೂ ಕೂಡಾ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಕೋಪಗೊಂಡ ನೀರಜಾ ತನ್ನ ಪತಿಯ ಕತ್ತನ್ನು ಹಗ್ಗದಿಂದ ಹತ್ಯೆಗೈದು ಬಳಿಕ ಮೃತದೇಹವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪತಿಯನ್ನು ಹತ್ಯೆಗೈದು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಈಕೆಗೆ ಮೃತದೇಹ ದುವಾಸನೆ ಬರುತ್ತಿದ್ದ ಕಾರಣ ನೀರಜಾ ಪೊಲೀಸರಿಗೆ ಕರೆ ಮಾಡಿದ್ದು, ಪತಿಯ ಹತ್ಯೆಯ ಬಗ್ಗೆ ಹೇಳಿದ್ದಾಳೆ. ನೀರಜಾ ಹಾಗೂ ನಿರ್ಮಲ್ ಸಿಂಗ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಮಲ್ ಸಿಂಗ್ನ ಸಹೋದರ ಅಶೋಕ್ ತಮ್ಮನ ಮನೆಗೆ ಬಂದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದ್ದೆ. ಇದಾದ ನಂತರ ನೀರಜಾ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತ ವ್ಯಕ್ತಿಯ ಶವವನ್ನು ಕುಟುಂದವರಿಗೆ ಹಸ್ತಾಂತರಿಸಿದ್ದಾರೆ.
ನೀರಜಾ ವಿರುದ್ದ ನಿರ್ಮಲ್ ಸಿಂಗ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ನೀರಜಾರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭ, ನನ್ನ ಪತಿ ನನಗೆ ಪ್ರತಿದಿನ ಹಲ್ಲೆ ಮಾಡುತ್ತಿದ್ದು, ಹೀಗಾಗಿ ಪತಿಯನ್ನು ಹತ್ಯೆ ಮಾಡಿದ್ದಾಗಿ ಎಂದು ತಿಳಿಸಿದ್ದಾಳೆ.