ನವದೆಹಲಿ,ಸೆ. 24(DaijiworldNews/HR): ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ವಿಫವಾಗಿದ್ದು, ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಸಿಎಜಿ ತನ್ನ ವರದಿಯಲ್ಲಿ, ಭಾರತಕ್ಕೆ 59 ಸಾವಿರ ಕೋಟಿ ರೂಪಾಯಿ ವೆಚ್ಚದ ಒಪ್ಪಂದದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಪ್ರಮುಖ ಕಂಪನಿಗಳಾದ ಡಸಾಲ್ಟ್ ಏವಿಯೇಶನ್ ಮತ್ತು ಎಂಬಿಡಿಎ, ಭಾರತಕ್ಕೆ ಉನ್ನತ ತಂತ್ರಜ್ಞಾನವನ್ನು ಪೂರೈಸುವ ಬದ್ಧತೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದೆ.
ಇನ್ನು 2015ರ ಸೆಪ್ಟೆಂಬರ್ನಲ್ಲಿ ಎರಡು ಕಂಪನಿಗಳು ನೀಡಿದ್ದ ಭರವಸೆಯಂತೆ, ಡಿಆರ್ಡಿಓಗೆ ಅತ್ಯುನ್ನತ ತಂತ್ರಜ್ಞಾನ ಪೂರೈಸುವ ಮೂಲಕ ಆಫ್ ಸೆಟ್ ಬದ್ಧತೆಯ ಶೇ. 30ರಷ್ಟು ಈಡೇರಿಸಬೇಕಿತ್ತು. ಆದರೆ ಇದರಲ್ಲಿ ಈ ಕಂಪನಿಗಳು ವಿಫಲವಾಗಿವೆ. ಭಾರತಕ್ಕೆ ರಫೆಲ್ ಯುದ್ಧ ವಿಮಾನ ಜೊತೆ ತಂತ್ರಜ್ಞಾನದ ವಿನಿಮಯ ಕೂಡ ಆಗಬೇಕಿತ್ತು. ಆದರೆ ಈ ವರೆಗೂ ಅದು ಆಗಿಲ್ಲ ಎಂದು ವಿವರಿಸಿದೆ.
ರಫೇಲ್ ಒಪ್ಪಂದವು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರಿ ಚರ್ಚೆಗೆ ನಡೆದಿತ್ತು. 'ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ' ಎಂದು ವಿರೋಧಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದವು. ವಿದೇಶಿ ಪಾಲುದಾರ ಸಂಸ್ಥೆ ಆಯ್ಕೆಯ ವಿಚಾರದಲ್ಲಿ ತನ್ನ ಪಾತ್ರ ಇಲ್ಲ' ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಪಾಲುದಾರನ ಆಯ್ಕೆಯ ವಿಚಾರದಲ್ಲಿ ನಮಗೆ ಆಯ್ಕೆಯೇ ಇರಲಿಲ್ಲ ಎಂದು ಫ್ರಾನ್ಸ್ನ ಮಾಜಿ ಅಧ್ಯಕ್ಷರು ಹೇಳಿದ್ದರಿಂದ ರಿಲಯನ್ಸ್ ಸಂಸ್ಥೆಯ ಪರವಾಗಿ ಸರ್ಕಾರವೇ ಕೆಲಸ ಮಾಡಿದೆ ಎಂಬ ಆರೋಪಗಳು ಬಂದಿದ್ದವು.