ಮೊರಾದಾಬಾದ್ , ಸೆ. 24 (DaijiworldNews/MB) : ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪ್ರಶ್ನಿಸಿದ ಬಾಲಕಿಯ ತಂದೆಯನ್ನು ಆರೋಪಿಯ ಸ್ನೇಹಿತರು ಮತ್ತು ಕುಟುಂಬಸ್ಥರು ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.
45 ವರ್ಷದ ಹರಿ ಓಂ ಅವರು ತನ್ನ 14 ವರ್ಷದ ಮಗಳೊಂದಿಗೆ ರಣವೀರ್ ಎಂಬ ವ್ಯಕ್ತಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ದೂರಿ ಮಂಗಳವಾರ ಸಂಜೆ ಮಹೇಶಪುರ ಗ್ರಾಮದಲ್ಲಿನ ರಣವೀರ್ನ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ರಣವೀರ್ (24) ನ ಸ್ನೇಹಿತರಾದ ವಿಕಾಸ್, 23, ಶರ್ಮಾ ಯಾದವ್, 24, ಮತ್ತು ಅಮರ್ ಸಿಂಗ್ (26) ಮತ್ತು ಕುಟುಂಬಸ್ಥರು ಅಪ್ರಾಪ್ತ ಬಾಲಕಿಯ ತಂದೆಗೆ ನಿರ್ದಯವಾಗಿ ಇಟ್ಟಿಗೆ ಮತ್ತು ಕೋಲುಗಳಿಂದ ಹೊಡೆದಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಸಾವನ್ನಪ್ಪಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಏಳು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ರಣವೀರ್ ಮತ್ತು ಆತನ ಸ್ನೇಹಿತರಾದ ವಿಕಾಸ್, ಶರ್ಮಾ ಯಾದವ್ ಮತ್ತು ಅಮರ್ ಸಿಂಗ್ ಅವರನ್ನು ಬಂಧಿಸಲಾಗಿದೆ.
"ಎರಡು ಕುಟುಂಬಗಳ ನಡುವೆ ಕೆಲವು ವಿವಾದಗಳಿದ್ದು, ಅವರು ಸಂಬಂಧಿಕರೂ ಆಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ" ಎಂದು ಮೊರಾದಾಬಾದ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಪ್ರಭಾಕರ್ ಚೌಧರಿ ಅವರಯ ತಿಳಿಸಿದ್ದಾರೆ.
"ಹರಿ ಓಂ ಅವರ ಮರಣದ ನಂತರ ಅವರ ಕುಟುಂಬ ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆ ಹೊರಗೆ ಧರಣಿ ನಡೆಸಿದರು. ಸ್ಥಳೀಯ ಪೊಲೀಸರ ನಿರ್ಲಕ್ಷ್ಯದಿಂದ ಕ್ರಮಕೈಗೊಳ್ಳುವಾಗ ವಿಳಂಬವಾಗಿದ್ದು ವಿಚಾರಣೆಗೆ ಆದೇಶಿಸಲಾಗಿದೆ" ಎಂದು ನಗರದ ಎಸ್ಪಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.