ನವದೆಹಲಿ, ಸೆ. 24(DaijiworldNews/HR): ಸೆಪ್ಟೆಂಬರ್ 10ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ರಫೇಲ್ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಆಗಿ ವಾರಾಣಸಿ ಮೂಲದ ಫ್ಲೈಟ್ ಲೆಫ್ಟಿನೆಂಟ್ ಶಿವಾನಿ ಸಿಂಗ್ ಸೇರ್ಪಡೆಯಾಗಿದ್ದಾರೆ.
ವಾಯುಪಡೆಯ ಅತ್ಯಂತ ಹಳೆಯ ಯುದ್ಧ ವಿಮಾನಗಳಲ್ಲಿ ಒಂದಾಗಿರುವ ಮಿಗ್-21 ಬಿಸನ್ ಚಲಾಯಿಸುತ್ತಿದ್ದ ಲೆಫ್ಟಿನೆಂಟ್ ಶಿವಾನಿ ಸಿಂಗ್ ಇನ್ನು ವಾಯುಪಡೆಯ ಅತ್ಯಾಧುನಿಕ ಮತ್ತು ಪ್ರಬಲ ಯುದ್ಧ ವಿಮಾನವಾದ ರಫೇಲ್ ಅನ್ನು ಚಲಾಯಿಸಲಿದ್ದಾರೆ.
ಮೂಲತಃ ಉತ್ತರ ಪ್ರದೇಶದ ವಾರಾಣಸಿಯವರಾದ ಶಿವಾನಿ ಸಿಂಗ್ 2017ರಲ್ಲಿ ವಾಯುಪಡೆಗೆ ಸೇರ್ಪಡೆಯಾದ ಐಎಎಫ್ ಅಧಿಕಾರಿ. ಭಾರತದ 10 ಮಹಿಳಾ ಫೈಟರ್ ಪೈಲಟ್ಗಳಲ್ಲಿ ಶಿವಾನಿ ಸಿಂಗ್ ಕೂಡ ಒಬ್ಬರಾಗಿದ್ದಾರೆ. ಅತ್ಯಾಧುನಿಕವಾದ ರಫೇಲ್ ಯುದ್ಧವಿಮಾನವನ್ನು ಚಲಾಯಿಸಲು ಶಿವಾನಿ ಸಿಂಗ್ ಅವರಿಗೆ ತರಬೇತಿ ನೀಡಲಾಗುತ್ತಿದೆ.
ಶಿವಾನಿ ಸಿಂಗ್ ಹರಿಯಾಣದ ಅಂಬಾಲದಲ್ಲಿರುವ ಗೋಲ್ಡನ್ ಆಯರೋಸ್ನ 17 ಪೈಲಟ್ಗಳ ತಂಡಕ್ಕೆ ಇದೀಗ ಸೇರ್ಪಡೆಯಾಗಿದ್ದಾರೆ. ಶಿವಾನಿ ಯುದ್ಧ ವಿಮಾನಗಳ ಹಾರಾಟದಲ್ಲಿ ಪರಿಣತಿ ಪಡೆದಿದ್ದು,ಇದೀಗ ಅವರು ವಾಯುಪಡೆಯ ಅತ್ಯಂತ ಹಳೆಯ ಯುದ್ಧವಿಮಾನದ ಚಾಲನೆಯಿಂದ ಅತ್ಯಾಧುನಿಕ ಯುದ್ಧವಿಮಾನವಾದ ರಫೇಲ್ ಪೈಲಟ್ ಆಗಿ ಆಯ್ಕೆಯಾಗಿರುವ ಮೂಲಕ ಭಾರತದ ಹೆಮ್ಮೆಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.