ನವದೆಹಲಿ, ಸೆ 24(DaijiworldNews/PY): ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ನಾಗರಿಕ ಸೇವಾ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ಸಂಬಂಧ ಕೇಂದ್ರ ಹಾಗೂ ಕೇಂದ್ರ ಲೋಕ ಸೇವಾ ಆಯೋಗಕ್ಕೆ ಗುರುವಾರ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಸಂಜೀವ್ ಖನ್ನಾ ಅವರ ನ್ಯಾಯಪೀಠವು ಸೆಪ್ಟೆಂಬರ್ 28ಕ್ಕೆ ಅರ್ಜಿ ವಿಚಾರಣೆಯನ್ನ ಮುಂದೂಡಿತು.
ಅಕ್ಟೋಬರ್ 4ರಂದು ನಡೆಯಲಿರುವ ನಾಗರಿಕ ಸೇವೆಗಳ ಪರೀಕ್ಷೆಯನ್ನು ಮುಂದೂಡುವಂತೆ ಯುಪಿಎಸ್ ಆಕಾಂಕ್ಷಿಗಳು ಈ ಅರ್ಜಿಯನ್ನು ಸಲ್ಲಿಸಿದ್ದು, ಪರೀಕ್ಷೆಯನ್ನು ಎರಡು ಅಥವಾ ಮೂರು ತಿಂಗಳು ಮುಂದೂಡಬೇಕು. ಆ ಸಮಯದಲ್ಲಿ ಮಳೆ, ಪ್ರವಾಹದ ಪರಿಸ್ಥಿತಿಯೂ ಕೂಡಾ ತಗ್ಗುತ್ತದೆ. ಅಲ್ಲದೇ, ಕೊರೊನಾ ಕೂಡಾ ನಿಯಂತ್ರಣದಲ್ಲಿರುತ್ತೆ ಎಂದು ಹೇಳಿದ್ದಾರೆ.