ಬೆಂಗಳೂರು,ಸೆ. 24(DaijiworldNews/HR): ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾರ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ತಿಳಿದುಕೊಳ್ಳಲು ಚೀನಾದ ನಾಗರಿಕರ ಬೇಹುಗಾರಿಕೆ ಜಾಲದ ಮೂಲಕ ಹವಾಲಾ ನೆಟ್ ವರ್ಕ್ ಬಳಸಿ ಟಿಬೆಟ್ ನಲ್ಲಿರುವ ತಮ್ಮ ಕುಟುಂಬದವರ ಮೂಲಕ ಕೆಲವು ಟಿಬೆಟ್ ನ ಸನ್ಯಾಸಿಗಳಿಗೆ ಹಣ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಸೆಪ್ಟೆಂಬರ್ 13ರಂದು ಬೇಹುಗಾರಿಕೆ ಆರೋಪದ ಮೇಲೆ ಕಳೆದ ದೆಹಲಿಯ ವಿಶೇಷ ಪೊಲೀಸರಿಂದ ಬಂಧಿತನಾಗಿದ್ದ ಚೀನಾದ ಪ್ರಜೆ ಲುಯು ಸ್ಯಾಂಗ್ ಅಲಿಯಾಸ್ ಚಾರ್ಲಿ ಪೆಂಗ್ ಟಿಬೆಟಿಯನ್ನರು ಹೆಚ್ಚಾಗಿರುವ ದೆಹಲಿ, ಹಿಮಾಚಲ ಪ್ರದೇಶದಿಂದ ಹಿಡಿದು ಕರ್ನಾಟಕದವರೆಗೆ ಬೇಹುಗಾರಿಕೆ ನಡೆಸುತ್ತಾ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಮ್ಯಾಕ್ಲಿಯೋಡ್ಗಂಜ್ ಕೇಂದ್ರ ಟಿಬೆಟಿಯನ್ ಆಡಳಿತದ ಪ್ರಧಾನ ಕಚೇರಿಯಾಗಿದ್ದು, ಅಲ್ಲಿ ದಲೈ ಲಾಮಾ ವಾಸಿಸುತ್ತಿದ್ದಾರೆ.
ಚೀನಾದ ಬಾಹ್ಯ ಗುಪ್ತಚರ ಸಂಸ್ಥೆ ರಾಜ್ಯ ಭದ್ರತಾ ಸಚಿವಾಲಯದ (ಎಂಎಸ್ಎಸ್) ಆದೇಶದ ಮೇರೆಗೆ ಹವಾಲಾ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ಸುಳಿವು ಸಿಕ್ಕಿ, ಲುವೊ ನಡೆಸುತ್ತಿರುವ ಶೆಲ್ ಕಂಪನಿಗಳು ಮತ್ತು 40 ಬ್ಯಾಂಕ್ ಖಾತೆಗಳ ಮೂಲಕ 1,000 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪತ್ತೆಹಚ್ಚಿದೆ ಎಂದು ತಿಳಿದು ಬಂದಿದೆ.