ನವದೆಹಲಿ, ಸೆ 24(DaijiworldNews/PY): ಕೊರೊನಾ ಯುದ್ದ 21 ದಿನಗಳಲ್ಲಿ ಮುಗಿಯಬೇಕಿತ್ತು ಎಂದು ಹೇಳಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು, 21 ದಿನಗಳಲ್ಲಿ ಕೊರೊನಾ ಯುದ್ಧ ಮುಗಿಯಬೇಕು ಎಂಬುದು ಅಜ್ಞಾನದಿಂದ ಕೂಡಿದ ಬಾಲಿಶ ಹೇಳಿಕೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್ ಅವರು, ಎನ್ ಡಿಎ-1 ಸರ್ಕಾರದ ಅವಧಿಯಲ್ಲಿ ಆರಂಭವಾದ ಬೀದರ್- ಕಲಬುರಗಿ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಲು 16 ವರ್ಷಗಳ ನಂತರ ಎನ್ ಡಿಎ-2 ಸರ್ಕಾರ ಬರಬೇಕಾಯ್ತು. ಇನ್ನು 21 ದಿನಗಳಲ್ಲಿ ಕೊರೊನಾ ಯುದ್ಧ ಮುಗಿಯಬೇಕು ಎಂಬುದು ಅಜ್ಞಾನದಿಂದ ಕೂಡಿದ ಬಾಲಿಶ ಹೇಳಿಕೆ ಎಂದಿದ್ದಾರೆ.
ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲ. ಅದೊಂದು ಸಾಮೂಹಿಕ ಪ್ರಜ್ಞೆ ಬೆಳೆಸುವ, ಅರಿವು ಮೂಡಿಸುವ ಮನೋವೈಜ್ಞಾನಿಕ ಪ್ರಕ್ರಿಯೆ ಆಗಿತ್ತು. ಏಡ್ಸ್, ಪೋಲಿಯೋದಂತಹ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಗಳೇ ಬೇಕಾಯ್ತು, ಆದರೆ ಲಾಕ್ಡೌನ್ ಮೂಲಕ ಕೆಲವೇ ದಿನಗಳಲ್ಲಿ ಅರಿವು ಮೂಡಿಸಲಾಯ್ತು ಎಂದು ತಿಳಿಸಿದ್ದಾರೆ.
ನೀವು ತಟ್ಟೆ ಬಡಿಯಲು ಕೇಳಿದ್ದಿರಿ, ನಾವು ಮಾಡಿದೆವು, ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು, ನೀವು ಮನೆಯಲ್ಲಿಯೇ ಇರಿ ಎಂದಿರಿ, ನಾವು ಇದ್ದೆವು, ನೀವು ಹೊರಬನ್ನಿ ಎಂದಿರಿ, ನಾವು ಬಂದೆವು, ನೀವು ಹೇಳಿದ ಎಲ್ಲವನ್ನು ನಾವು ಮಾಡಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಯಬೇಕಿತ್ತು ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಆದರೆ ಕನ್ನಡಿಗರಿಗೆ ಸಿಕ್ಕಿದ್ದೇನು? ಹೆಚ್ಚು ಸೋಂಕು, ಹೆಚ್ಚಿನ ವೈದ್ಯಕೀಯ ಬಿಲ್ಗಳು, ಸಾವಿನಲ್ಲಿ ರಾಜಕೀಯ, ಹಾಸಿಗೆಗಳಿಲ್ಲಾ, ಆಮ್ಲಜನಕವಿಲ್ಲಾ, ಔಷಧಿ ಲಭ್ಯತೆ ಇಲ್ಲಾ, ಆಂಬುಲೆನ್ಸ್ ಗಳಿಲ್ಲಾ, ಆರ್ಥಿಕ ಕುಸಿತ, ಸಾವಿನಲ್ಲಿ ಘನತೆಯಿಲ್ಲಾ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಿ ನಿರುದ್ಯೋಗಿಗಳನ್ನಾಗಿಸಿ
ಜಿಎಸ್ಟಿ ಪರಿಹಾರ ಮರುಪಾವತಿ ಮಾಡಲಿಲ್ಲ ಎಂದಿದ್ದಾರೆ.
ಈ ಸಾಂಕ್ರಾಮಿಕ ಕಾಲದಲ್ಲಿ ಸರ್ಕಾರ ಮಾತ್ರ ಭ್ರಷ್ಟಾಚಾರದ ದೊಡ್ಡ ಸೋಂಕನ್ನು ಅಂಟಿಸಿಕೊಂಡಿತು. ಸ್ವಿಮ್ಮಿಂಗ್ ಪೂಲ್ನಲ್ಲಿ ಇಳಿದರೆ ಈ ವೈರಸ್ ಹೋಗುವುದಿಲ್ಲಾ, ಸರ್ಕಾರವು ಸೋಂಕಿಗೆ ಒಳಗಾಗದಿದ್ದರೆ ಆಗಿರುವ ಅವ್ಯವಹಾರವನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಿ ನೋಡೋಣ. ಎಂದು ಹೇಳಿದ್ದಾರೆ.