ನವದೆಹಲಿ, ಸೆ 24(DaijiworldNews/PY): ಕೊರೊನಾ ಸೋಂಕು ದೃಢಪಟ್ಟ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯನ್ನು ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ ರುದ್ರಭೂಮಿಯಲ್ಲಿ ಕೊರೊನಾ ನಿಯಾವಳಿಗಳ ಪ್ರಕಾರ ನಡೆಯಿತು.
ಸುರೇಶ ಅಂಗಡಿ ಅವರ ಪತ್ನಿ ಮಂಗಳಾ, ಪುತ್ರಿಯರು, ಅಳಿಯಂದಿರು, ಸಂಬಂಧಿಗಳು ಸೇರಿದಂತೆ ಜಗದೀಶ ಶೆಟ್ಟರ್ ದಂಪತಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ, ವಿ.ಸೋಮಣ್ಣ, ಸಂಸದರು ಸೇರಿದಂತೆ ಆಪ್ತರು ಉಪಸ್ಥಿತರಿದ್ದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯುತ ವಿಧಿವಿಧಾನದ ಮೂಲಕ ಸುರೇಶ ಅಂಗಡಿಯವರ ಅಂತ್ಯಕ್ರಿಯೆ ನೆರವೇರಿತು.
ಸೆಪ್ಟೆಂಬರ್ 11ರಂದು ಸುರೇಶ್ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟ ಬಗ್ಗೆ ತಿಳಿಸಿದ್ದರು. ಬಳಿಕ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 23ರಂದು ರಾತ್ರಿ ಅವರು ಮೃತಪಟ್ಟಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಂಗಡಿ ಸಂಸದರಾಗಿ ಆಯ್ಕೆಯಾಗಿದ್ದರು. 2004, 2009, 2014, 2019ರಲ್ಲಿ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.