ಚೆನ್ನೈ, 24 (DaijiworldNews/SM): ಕಳೆದ ಕೆಲವು ಸಮಯದಿಂದ ಅನಾರೋಗ್ಯದಲ್ಲಿರುವ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂಬ ಮಾಹಿತಿಯನ್ನು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಬಗ್ಗೆ ಚಿಕಿತ್ಸೆ ನೀಡಲಾಗುತ್ತಿರುವ ಚೆನ್ನೈನ ಎಂಜಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 5 ರಿಂದ ಎಸ್ ಪಿ ಬಿಯವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಬಾರಿ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದೆ. ಆದರೆ, ಇದೀಗ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅವರ ಆರೈಕೆ ಮಾಡುತ್ತಿರುವ ವೈದ್ಯರು ತಿಳಿಸಿದ್ದು, ಈ ಬಗ್ಗೆ ಹೆಲ್ತ್ ಬುಲೆಟಿನ್ ಮೂಲಕ ಪ್ರಕಟಿಸಲಾಗಿದೆ.
ಇನ್ನು ದಿನಗಳ ಹಿಂದೆಯಷ್ಟೇ ಗುಣಮುಖರಾಗುತ್ತಿದ್ದಾರೆ ಎಂದು ಅವರ ಮಗ ಚರಣ್ ಮಾಹಿತಿ ನೀಡಿದ್ದರು. ಅಲ್ಲದೆ, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇನ್ನು ಸೆಪ್ಟೆಂಬರ್ 7 ರಂದು ಎಸ್ಪಿಬಿ ಅವರಿಗೆ ಕೊರೊನಾ ನೆಗೆಟಿವ್ ದೃಢಪಟ್ಟಿತ್ತು ಎಂದು ಚರಣ್ ತಿಳಿಸಿದ್ದರು. ಈ ನಡುವೆ ಆಸ್ಪತ್ರೆಯಲ್ಲಿಯೇ ಅವರ ಮದುವೆ ವಾರ್ಷಿಕೋತ್ಸವ ಸಂಭ್ರಮಿಸಲಾಗಿತ್ತು. ಆದರೆ, ಇದೀಗ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ತಿಳಿದು ಬಂದಿದೆ. ಅವರು ಚೇತರಿಸಿಕೊಳ್ಳುವಂತೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.