ಬೆಂಗಳೂರು, ಸೆ 25(DaijiworldNews/PY): ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಸುಗ್ರೀವಾಜ್ಞೆ ಹಾಗೂ ಮಸೂದೆಗಳು ರೈತ, ಕಾರ್ಮಿಕರ ವಿರೋಧಿಯಾಗಿವೆ ಎಂದು ಆರೋಪಿಸಿ ರೈತ, ದಲಿತ ಹಾಗೂ ಕಾರ್ಮಿಕರ ಸಮಿತಿಯು ರಾಜ್ಯಾದ್ಯಂತ ಶುಕ್ರವಾರ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಯಲ್ಲಿ 35ಕ್ಕೂ ಅಧಿಕ ಸಂಘಟನೆಗಳು ಭಾಗವಹಿಸಲಿದ್ದು, ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸೇರಿ ರೈತ ವಿರೋಧಿ ನೀತಿಯ ವಿರುದ್ದ ಪ್ರತಿಭಟನೆ ನಡೆಸಲಿವೆಂದು ಸಮಿತಿ ತಿಳಿಸಿದೆ.
ಪ್ರತಿಭಟನೆಯಲ್ಲಿ ಎಲ್ಲಾ ಸಂಘಟನೆಗಳು ಭಾಗವಹಿಸಿದ್ದು, ಸಂಘಟನೆಗಳ ನಡುವೆ ಯಾವುದೇ ಗೊಂದಲವಿಲ್ಲ. ಇನ್ನು ನಗರದ ಹೊರವಲಯಗಳಾದ ನಾಯಂಡಹಳ್ಳಿ, ಗೊರಗುಂಟೆಪಾಳ್ಯ ಬಳಿಯ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ತಡೆಯಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಮ್ಮ ಸಂಘವು ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಾತ್ರವೇ ಭಾಗವಹಿಸಲಿದೆ. ಅಲ್ಲದೇ, ವಾಹನ ತಡೆದು ಪ್ರತಿಭಟನೆ ನಡೆಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.